Zechariah - Chapter 8
Holy Bible

1 : ಸೇನಾಧೀಶ್ವರ ಸರ್ವೇಶ್ವರ ಜೆಕರ್ಯನಿಗೆ ಪುನಃಕೊಟ್ಟ ಸಂದೇಶವಿದು:
2 : “ಸಿಯೋನಿನ ವಿಷಯದಲ್ಲಿ ನನಗೆ ತುಂಬಾ ಅಭಿಮಾನವಿದೆ. ಅದರ ಶತ್ರುಗಳ ವಿಷಯದಲ್ಲಿ ಅಧಿಕ ರೋಷವಿದೆ.”
3 : ಸರ್ವೇಶ್ವರ ಇಂತೆನ್ನುತ್ತಾರೆ: “ಸಿಯೋನಿಗೆ ಹಿಂದಿರುಗುವೆನು. ಜೆರುಸಲೇಮಿನ ನಡುವೆ ವಾಸ ಮಾಡುವೆನು. ಆಗ ಜೆರುಸಲೇಮ್ ‘ನಿಷ್ಠಾವಂತ ನಗರ’ ಎನಿಸಿಕೊಳ್ಳುವುದು. ಅದಕ್ಕೆ ಸೇನಾಧೀಶ್ವರ ಸರ್ವೇಶ್ವರನ ಪರ್ವತ, ಪವಿತ್ರ ಪರ್ವತ ಎಂಬ ಹೆಸರು ಬರುವುದು.”
4 : ಸೇನಾಧೀಶ್ವರ ಸರ್ವೇಶ್ವರ ಹೀಗೆನ್ನುತ್ತಾರೆ: “ಮುದುಕರು, ಮುದುಕಿಯರು ಮತ್ತೆ ಜೆರುಸಲೇಮಿನ ಚೌಕಗಳಲ್ಲಿ ಕುಳಿತುಕೊಳ್ಳುವರು. ವೃದ್ಧಾಪ್ಯದ ಪ್ರಯುಕ್ತ ಒಬ್ಬೊಬ್ಬರ ಕೈಯಲ್ಲಿ ಊರುಗೋಲು ಇರುವುದು.
5 : ಪಟ್ಟಣದ ಹಾದಿಬೀದಿಗಳಲ್ಲಿ ಮಕ್ಕಳು ತುಂಬಿಕೊಂಡಿರುವರು.”
6 : ಸೇನಾಧೀಶ್ವರ ಸರ್ವೇಶ್ವರ ಹೀಗೆನ್ನುತ್ತಾರೆ: “ಅಳಿದುಳಿದಿರುವ ಜನರಿಗೆ ಇಂಥ ಪರಿಸ್ಥಿತಿ ಅತಿಶಯವಾಗಿ ಕಾಣಬಹುದು. ಆದರೆ ನನಗೆ ಅದೇನೂ ಅತಿಶಯವಲ್ಲ.” ಇದು ಸರ್ವೇಶ್ವರನ ನುಡಿ.
7 : ಸೇನಾಧೀಶ್ವರ ಸರ್ವೇಶ್ವರ ಇಂತೆನ್ನುತ್ತಾರೆ. “ಇಗೋ, ನಾನು ನನ್ನ ಜನರನ್ನು ಪೂರ್ವ ಪಶ್ಚಿಮ ನಾಡುಗಳಿಂದ ಬಿಡುಗಡೆಮಾಡಿ, ಇಲ್ಲಿಗೆ ಬರಮಾಡುವೆನು.
8 : ಅವರು ಜೆರುಸಲೇಮಿನಲ್ಲೇ ವಾಸವಾಗಿರುವರು. ನಾನು ಅವರಿಗೆ ದೇವರಾಗಿರುವೆನು; ಅವರು ನನಗೆ ಸತ್ಸಂಬಂಧವುಳ್ಳ, ಸದ್ಧರ್ಮದ ಪ್ರಜೆಗಳಾಗಿರುವರು.”
9 : ಸೇನಾಧೀಶ್ವರ ಸರ್ವೇಶ್ವರ ಹೀಗೆಂದಿದ್ದಾರೆ: “ನಿಮ್ಮ ಕೈ ಮುಂದಾಗಲಿ. ಈಗ ನೀವು ಕೇಳುತ್ತಿರುವ ಮಾತುಗಳು ಮಹಾದೇವಾಲಯಕ್ಕೆ ಅಸ್ತಿಭಾರವನ್ನು ಹಾಕಿದ ಕಾಲದಲ್ಲಿ ಪ್ರವಾದಿಗಳು ಆಡಿದ ಮಾತುಗಳೇ.
10 : ಆ ಕಾಲಕ್ಕೆ ಹಿಂದೆ ಆಳುಗಳಿಗೆ ಕೂಲಿ ಕೊಡುವುದಕ್ಕಾಗಲೀ ಎತ್ತುಗಾಡಿಗಳಿಗೆ ಬಾಡಿಗೆ ಕೊಡುವುದಕ್ಕಾಗಲೀ ಯಾರಿಗೂ ಶಕ್ತಿ ಇರಲಿಲ್ಲ. ನಾಡಿನಿಂದ ಹೋಗುವವರಿಗಾಗಲೀ, ನಾಡಿನೊಳಗೆ ಪ್ರವೇಶಿಸುವವರಿಗಾಗಲೀ ಶತ್ರುಗಳ ಕಾಟದಿಂದ ರಕ್ಷಣೆ ಇರಲಿಲ್ಲ. ಒಬ್ಬರಿಗೊಬ್ಬರು ಹಗೆಗಳಾಗಿರುವಂತೆ ಮಾಡಿದ್ದೆ.
11 : ಇನ್ನು ಮೇಲಾದರೋ, ಅಳಿದುಳಿದ ಜನರಿಗೆ ಹಾಗೆ ಮಾಡೆನು. ಇದು ಸೇನಾಧೀಶ್ವರ ಸರ್ವೇಶ್ವರಸ್ವಾಮಿಯ ನುಡಿ.
12 : ಜನರು ನೆಮ್ಮದಿಯಿಂದ ಬಿತ್ತನೆ ಮಾಡುವರು. ದ್ರಾಕ್ಷಾಲತೆ ಹಣ್ಣುಬಿಡುವುದು. ಭೂಮಿಯಲ್ಲಿ ಬೆಳೆಯಾಗುವುದು. ಆಕಾಶ ಮಳೆಯನ್ನು ಸುರಿಸುವುದು. ಅಳಿದುಳಿದ ಜನರಿಗೆ ಈ ಸೌಭಾಗ್ಯ ಲಭಿಸುವಂತೆ ಮಾಡುವೆನು.
13 : ಜುದೇಯದ ಕುಲಸ್ಥರೇ, ಇಸ್ರಯೇಲ್ ವಂಶಜರೇ, ರಾಷ್ಟ್ರಗಳಲ್ಲಿ ನಿಮ್ಮ ಹೆಸರು ಶಾಪಕ್ಕೆ ಅಡ್ಡ ಹೆಸರಾಗಿತ್ತು. ಆದರೆ ನಾನು ನಿಮ್ಮನ್ನು ಉದ್ಧರಿಸಿ ನಿಮ್ಮ ಹೆಸರು ಶುಭಸೂಚ್ಯವಾಗುವಂತೆ ಮಾಡುವೆನು. ಹೆದರಬೇಡಿ; ನಿಮ್ಮ ಕೈ ಮುಂದಾಗಲಿ.”
14 : ಸೇನಾಧೀಶ್ವರ ಸರ್ವೇಶ್ವರ ಇಂತೆನ್ನುತ್ತಾರೆ: “ನಿಮ್ಮ ಪೂರ್ವಜರ ನಿಮಿತ್ತ ನಾನು ಕೋಪಗೊಂಡಾಗ, ನಿಮಗೆ ಕೇಡುಮಾಡಬೇಕೆಂದು ನಿಷ್ಕರುಣಿಯಾಗಿ ಸಂಕಲ್ಪಿಸಿದೆ.
15 : ಆದರೆ ಈಗ ಜೆರುಸಲೇಮಿನವರಿಗೂ ಜುದೇಯದ ಜನರಿಗೂ ಮೇಲುಮಾಡಬೇಕೆಂದು ಹೊಸ ಸಂಕಲ್ಪ ಮಾಡಿದ್ದೇನೆ. ಆದುದರಿಂದ ಹೆದರಬೇಡಿ.” ಇದು ಸೇನಾಧೀಶ್ವರ ಸರ್ವೇಶ್ವರಸ್ವಾಮಿಯ ನುಡಿ.
16 : “ನೀವು ಮಾಡಬೇಕಾದುದು ಏನೆಂದರೆ: ಪ್ರತಿಯೊಬ್ಬನು ತನ್ನ ನೆರೆಯವನೊಡನೆ ಸತ್ಯವನ್ನೇ ಆಡಲಿ. ನ್ಯಾಯಾಲಯಗಳಲ್ಲಿ ನಿಮ್ಮ ತೀರ್ಪು ನ್ಯಾಯಸಮ್ಮತವಾಗಿರಲಿ, ಶಾಂತಿಯ ಸಾಧನ ಆಗಿರಲಿ.
17 : ನಿಮ್ಮಲ್ಲಿ ಯಾರೂ ನೆರೆಯವನಿಗೆ ಕೇಡು ಬಗೆಯದಿರಲಿ. ಸುಳ್ಳುಸಾಕ್ಷ್ಯಕ್ಕೆ ಎಂದೂ ಸಂತೋಷಿಸಬೇಡಿ. ಇದೆಲ್ಲ ನನಗೆ ಅಸಹ್ಯ.” ಇದು ಸೇನಾಧೀಶ್ವರ ಸರ್ವೇಶ್ವರ ಸ್ವಾಮಿಯ ನುಡಿ.
18 : ಸೇನಾಧೀಶ್ವರ ಸರ್ವೇಶ್ವರ ನನಗೆ ಕೊಟ್ಟ ಸಂದೇಶವೇನೆಂದರೆ:
19 : “ನಾಲ್ಕನೇ, ಐದನೇ, ಏಳನೇ ಮತ್ತು ಹತ್ತನೇ ತಿಂಗಳುಗಳ ಉಪವಾಸ ಇವು ಯೆಹೂದ್ಯ ವಂಶಕ್ಕೆ ವಿಶೇಷ ಹಬ್ಬದ ದಿನಗಳಾಗಿ ಮಾರ್ಪಟ್ಟು, ಜನರು ಹರ್ಷಿಸಿ ಆನಂದಿಸುವರು. ಇಂತಿರಲು ಸತ್ಯವನ್ನೂ ಸಮಾಧಾನವನ್ನೂ ಪ್ರೀತಿಸಿರಿ.”
20 : ಸೇನಾಧೀಶ್ವರ ಸರ್ವೇಶ್ವರ ಇಂತೆನ್ನುತ್ತಾರೆ: “ಇನ್ನು ಮುಂದೆ ಜನಾಂಗಗಳೂ ಹಲವು ನಗರ ನಿವಾಸಿಗಳೂ ಜೆರುಸಲೇಮಿಗೆ ಬರುವರು.
21 : ‘ಸೇನಾಧೀಶ್ವರ ಸರ್ವೇಶ್ವರಸ್ವಾಮಿಯನ್ನು ಆರಾಧಿಸಲು, ಅವರ ಆಶೀರ್ವಾದವನ್ನು ಬೇಡಲು ದೇವಾಲಯಕ್ಕೆ ಹೋಗುತ್ತಿದ್ದೇವೆ. ನಮ್ಮೊಡನೆ ಬನ್ನಿ, ಹೋಗೋಣ’ ಎಂದು ಒಂದು ಊರಿನವರು ಮತ್ತೊಂದೂರಿನವರಿಗೆ ಹೇಳುವರು.
22 : “ನಾನಾ ದೇಶಗಳಿಂದ, ಪ್ರಬಲ ರಾಷ್ಟ್ರಗಳಿಂದ ಸೇನಾಧೀಶ್ವರ ಸರ್ವೇಶ್ವರಸ್ವಾಮಿಯನ್ನು ಆರಾಧಿಸಿ, ಅವರ ಆಶೀರ್ವಾದವನ್ನು ಕೋರಲು ಜನರು ಜೆರುಸಲೇಮಿಗೆ ಬರುವರು.
23 : ಆ ದಿನದಲ್ಲಿ ವಿವಿಧ ಭಾಷೆಗಳನ್ನಾಡುವ ರಾಷ್ಟ್ರಗಳಿಂದ ಹತ್ತು ಹತ್ತು ಮಂದಿ ಬಂದು ಯೆಹೂದ್ಯನೊಬ್ಬನ ಸೆರಗನ್ನು ಹಿಡಿದುಕೊಂಡು, ‘ನಾವೂ ನಿಮ್ಮೊಂದಿಗೆ ಬರುತ್ತೇವೆ. ಏಕೆಂದರೆ ದೇವರು ನಿಮ್ಮೊಡನೆ ಇದ್ದಾರೆ ಎಂಬ ಸುದ್ದಿಯನ್ನು ಕೇಳಿದ್ದೇವೆ’ ಎಂದು ಹೇಳುವರು. ಇದು ಸೇನಾಧೀಶ್ವರ ಸರ್ವೇಶ್ವರಸ್ವಾಮಿಯ ನುಡಿ.”

Holydivine