Zechariah - Chapter 2
Holy Bible

1 : ನನಗೆ ಮತ್ತೊಂದು ದರ್ಶನವಾಯಿತು. ಕೈಯಲ್ಲಿ ಅಳತೆನೂಲನ್ನು ಹಿಡಿದುಕೊಂಡಿದ್ದ ಒಬ್ಬನು ಕಾಣಿಸಿಕೊಂಡ.
2 : “ಎಲ್ಲಿಗೆ ಹೋಗುತ್ತಿರುವೆ?” ಎಂದು ನಾನು ಅವನನ್ನು ಕೇಳಿದಾಗ, ಅವನು: “ಜೆರುಸಲೇಮಿನ ಉದ್ದ-ಅಗಲ ಎಷ್ಟಿದೆಯೆಂದು ಅಳೆಯಲು ಹೋಗುತ್ತಿದ್ದೇನೆ,” ಎಂದು ಉತ್ತರಕೊಟ್ಟನು.
3 : ಆಗ ಸೂತ್ರಧಾರಿಯಾದ ದೂತನು ಮುಂದೆ ಬರುತ್ತಿರಲು, ಇನ್ನೊಬ್ಬ ದೂತನು ಆತನನ್ನು ಎದುರುಗೊಂಡು,
4 : “ಅಳೆಯಲು ಹೋಗುತ್ತಿರುವ ಆ ಯುವಕನಿಗೆ ಓಡಿಹೋಗಿ ಈ ಮಾತನ್ನು ತಿಳಿಸು: ‘ಜೆರುಸಲೇಮಿನಲ್ಲಿ ಜನರ ಮತ್ತು ದನಕರುಗಳ ಸಂಖ್ಯೆ ಅಪಾರವಾಗುವುದು. ಅದು ಪೌಳಿಗೋಡೆಗಳಿಲ್ಲದ ಊರುಕೇರಿಗಳಂತೆ ಹರಡಿಕೊಳ್ಳುವುದು.
5 : ನಾನೇ ಅದರ ಸುತ್ತಮುತ್ತಲು ಅಗ್ನಿ ಪ್ರಾಕಾರವಾಗಿ, ಅದರೊಳಗಿನ ವೈಭವವಾಗಿರುವೆನು. ಇದು ಸರ್ವೇಶ್ವರಸ್ವಾಮಿಯ ನುಡಿ,’ ಎಂದ.”
6 : ಸರ್ವೇಶ್ವರ ತಮ್ಮ ಜನರಿಗೆ ಇಂತೆನ್ನುತ್ತಾರೆ: “ಚತುರ್ದಿಕ್ಕುಗಳಿಗೆ ನಿಮ್ಮನ್ನು ಚದರಿಸಿದವನು ನಾನೇ. ಆದರೆ ಈಗ ಎಚ್ಚೆತ್ತುಕೊಳ್ಳಿ, ಹೊರನಾಡುಗಳಿಂದ ಓಡಿಬನ್ನಿ, ಇದು ಸರ್ವೇಶ್ವರನ ನುಡಿ. ಬಾಬಿಲೋನಿಗೆ ಸೆರೆಹೋದ ಸಿಯೋನಿನವರೇ, ಅಲ್ಲಿಂದ ತಪ್ಪಿಸಿಕೊಂಡು ಬನ್ನಿ.
7 : ಸರ್ವೇಶ್ವರ ತಮ್ಮ ಜನರಿಗೆ ಇಂತೆನ್ನುತ್ತಾರೆ: “ಚತುರ್ದಿಕ್ಕುಗಳಿಗೆ ನಿಮ್ಮನ್ನು ಚದರಿಸಿದವನು ನಾನೇ. ಆದರೆ ಈಗ ಎಚ್ಚೆತ್ತುಕೊಳ್ಳಿ, ಹೊರನಾಡುಗಳಿಂದ ಓಡಿಬನ್ನಿ, ಇದು ಸರ್ವೇಶ್ವರನ ನುಡಿ. ಬಾಬಿಲೋನಿಗೆ ಸೆರೆಹೋದ ಸಿಯೋನಿನವರೇ, ಅಲ್ಲಿಂದ ತಪ್ಪಿಸಿಕೊಂಡು ಬನ್ನಿ.
8 : ತಮ್ಮ ಮಹಿಮೆಯನ್ನು ತಿಳಿಸುವುದಕ್ಕಾಗಿ ನನ್ನನ್ನು ಕಳುಹಿಸಿದ ಸೇನಾಧೀಶ್ವರ ಸರ್ವೇಶ್ವರ ನಿಮ್ಮನ್ನು ಸೂರೆಮಾಡಿದ ರಾಷ್ಟ್ರಗಳಿಗೆ ಕೊಡುವ ಎಚ್ಚರಿಕೆ ಇದು:
9 : ‘ನಿಮ್ಮನ್ನು ಮುಟ್ಟುವವರು ನನ್ನ ಕಣ್ಮಣಿಯನ್ನೇ ಮುಟ್ಟಿದಂತೆ! ಇಗೋ, ನಾನು ಅವರ ಮೇಲೆ ಕೈಯೆತ್ತುವೆನು. ಅವರು ತಮ್ಮ ದಾಸರ ಕೈಯಿಂದಲೇ ಸೂರೆಯಾಗುವರು. ನನ್ನನ್ನು ಕಳುಹಿಸಿದವರು ಸೇನಾಧೀಶ್ವರ ಸರ್ವೇಶ್ವರ ಎಂಬುದು ಆಗ ನಿಮಗೆ ಗೊತ್ತಾಗುವುದು’.”
10 : ಸರ್ವೇಶ್ವರ ಇಂತೆನ್ನುತ್ತಾರೆ: “ಎಲೈ ಸಿಯೋನ್ ನಗರವೇ ಸಂತೋಷಪಡು, ಜಯಕಾರ ಮಾಡು; ಇಗೋ, ನಾನೇ ಬಂದು ನಿನ್ನ ಮಧ್ಯೆ ವಾಸಿಸುವೆನು!”
11 : ಆ ದಿನದಂದು ಹಲವಾರು ರಾಷ್ಟ್ರಗಳು ಸರ್ವೇಶ್ವರ ಸ್ವಾಮಿಯನ್ನು ಆಶ್ರಯಿಸಿಕೊಳ್ಳುವರು. ಅವರು ಆ ಸ್ವಾಮಿಯ ಜನರಾಗುವರು. ಸ್ವಾಮಿ ಅವರ ಮಧ್ಯೆ ವಾಸಿಸುವರು. ಸೇನಾಧೀಶ್ವರರಾದ ಆ ಸ್ವಾಮಿಯೇ ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾರೆ ಎಂಬುದು ಆಗ ನಿಮಗೆ ಗೊತ್ತಾಗುವುದು.
12 ಪವಿತ್ರ ಭೂಮಿಯಲ್ಲಿ ಜುದೇಯ ನಾಡನ್ನು ಸ್ವಾಮಿ ತಮ್ಮ ಸೊತ್ತಾಗಿ ಮಾಡಿಕೊಳ್ಳುವರು. ಜೆರುಸಲೇಮನ್ನು ತಮಗಾಗಿ ಮರಳಿ ಆರಿಸಿಕೊಳ್ಳುವರು.
13: ಸರ್ವೇಶ್ವರ ತಮ್ಮ ಪರಿಶುದ್ಧಾಲಯದಿಂದ ಹೊರಬರುತ್ತಿದ್ದಾರೆ. ನರಮಾನವರೇ, ಅವರ ಶ್ರೀಸನ್ನಿಧಿಯಲ್ಲಿ ನೀವೆಲ್ಲರು ಮೌನತಾಳಿರಿ.

Holydivine