Zechariah - Chapter 12
Holy Bible

1 : ಇಸ್ರಯೇಲಿನ ವಿಷಯವಾಗಿ ಸರ್ವೇಶ್ವರಸ್ವಾಮಿ ನುಡಿದ ದೈವೋಕ್ತಿ: ಆಕಾಶ ಮಂಡಲವನ್ನು ಹರಡಿ, ಭೂಲೋಕಕ್ಕೆ ಅಸ್ತಿಭಾರವನ್ನು ಹಾಕಿ, ಮಾನವನ ಜೀವಾತ್ಮವನ್ನು ಸೃಷ್ಟಿಸುವ ಸರ್ವೇಶ್ವರ ಇಂತೆನ್ನುತ್ತಾರೆ:
2 : “ನಾನು ಜೆರುಸಲೇಮನ್ನು ಮದ್ಯದ ಬುಡ್ಡಿಯನ್ನಾಗಿ ಮಾಡುವೆನು. ಅದರ ಸುತ್ತಮುತ್ತಲಿರುವ ರಾಷ್ಟ್ರಗಳು ಆ ಬುಡ್ಡಿಯಿಂದ ಕುಡಿದು ಮತ್ತರಾಗಿ, ಅತ್ತಿತ್ತ ಓಲಾಡುವರು. ಜೆರುಸಲೇಮಿಗೆ ಅವರು ಮುತ್ತಿಗೆ ಹಾಕುವಾಗ ಜುದೇಯವೆಲ್ಲವೂ ಇಕ್ಕಟ್ಟಿಗೆ ಒಳಗಾಗುವುದು.
3 : ಆ ದಿನದಂದು ಜೆರುಸಲೇಮನ್ನು ಭಾರಿ ಬಂಡೆಯನ್ನಾಗಿ ಮಾಡುವೆನು. ಅದನ್ನು ಎತ್ತಲು ಯತ್ನಿಸುವವರೆಲ್ಲರಿಗೂ ತೀವ್ರ ಗಾಯವಾಗುವುದು. ವಿಶ್ವದ ರಾಷ್ಟ್ರಗಳು ಅದನ್ನು ಎತ್ತಿ ಹಾಕಲು ಕೂಡಿಬರುವುವು.
4 : ಆಗ ಅವರ ಕುದುರೆಗಳೆಲ್ಲ ತಬ್ಬಿಬ್ಬಾಗುವಂತೆ ಮಾಡುವೆನು. ರಾಹುತರನ್ನು ದಿಗ್ಭ್ರಮೆಗೊಳಿಸುವೆನು. ಜುದೇಯ ಮನೆತನವನ್ನು ಕಟಾಕ್ಷಿಸಿ, ಇತರ ರಾಷ್ಟ್ರಗಳ ಕುದುರೆಗಳನ್ನೆಲ್ಲಾ ಕುರುಡಾಗಿಸುವೆನು.
5 : ಆಗ ಜುದೇಯದ ನಾಯಕರೆಲ್ಲ ತಮ್ಮತಮ್ಮೊಳಗೇ; ‘ಜೆರುಸಲೇಮಿನ ನಿವಾಸಿಗಳ ಶಕ್ತಿಸಾಮಥ್ರ್ಯ ಸೇನಾಧೀಶ್ವರ ಸರ್ವೇಶ್ವರನಾದ ದೇವರೇ’ ಎಂದುಕೊಳ್ಳುವರು
6 : “ಆ ದಿನದಂದು ಜುದೇಯದ ಕುಲನಾಯಕರನ್ನು ಕಟ್ಟಿಗೆಯ ಮಧ್ಯೆ ಇರುವ ಅಗ್ಗಿಷ್ಟಿಕೆಯನ್ನಾಗಿಯೂ ಸಿವುಡುಗಳ ನಡುವೆ ಉರಿಯುವ ಪಂಜನ್ನಾಗಿಯೂ ಮಾಡುವೆನು. ಅವರು ಸುತ್ತಮುತ್ತಲಿನ ರಾಷ್ಟ್ರಗಳನ್ನು ಎಡಬಲವೆನ್ನದೆ ನಾಶಮಾಡುವರು. ಜೆರುಸಲೇಮಿನ ನಿವಾಸಿಗಳಾದರೋ ತಮ್ಮ ನಗರದಲ್ಲೇ ಸುರಕ್ಷಿತವಾಗಿರುವರು.
7 : “ಸರ್ವೇಶ್ವರನಾದ ನಾನು ಜುದೇಯದ ಸೈನ್ಯಗಳು ಮೊದಲು ಜಯಗಳಿಸುವಂತೆ ಮಾಡುವೆನು. ಆಗ ದಾವೀದ ವಂಶದವರ ಹಾಗೂ ಜೆರುಸಲೇಮಿನವರ ಘನತೆ ಗೌರವ ಜುದೇಯದವರ ಘನತೆ ಗೌರವವನ್ನು ಮೀರದು.
8 : ಅಂದು, ಸರ್ವೇಶ್ವರ ಜೆರುಸಲೇಮಿನ ನಿವಾಸಿಗಳನ್ನು ಕೋಟೆಯಂತೆ ಕಾಪಾಡುವರು. ಈ ಕಾರಣ, ಅವರಲ್ಲಿ ದುರ್ಬಲನು ದಾವೀದನಂತೆ ಬಲಾಢ್ಯನಾಗುವನು. ದಾವೀದನವಂಶ ದೇವದೂತರಂತೆ, ಹೌದು, ದೇವರಂತೆ, ಅವರಿಗೆ ಮುಂದಾಳಾಗುವುದು.
9 : ಆ ದಿನದಂದು ಜೆರುಸಲೇಮಿನ ಮೇಲೆ ಬೀಳುವ ರಾಷ್ಟ್ರಗಳೆಲ್ಲವನ್ನು ನಾನೇ ಧ್ವಂಸಮಾಡುವೆನು.
10 : “ದಾವೀದನ ವಂಶಜರಲ್ಲೂ ಜೆರುಸಲೇಮಿನ ನಿವಾಸಿಗಳ ಮನದಲ್ಲೂ ಕರುಣಿಸುವ ಹಾಗೂ ಪ್ರಾರ್ಥಿಸುವ ಮನೋಭಾವವನ್ನು ಸುರಿಸುವೆನು. ತಾವು ಇರಿದವನನ್ನೇ ಅವರು ಆಗ ದಿಟ್ಟಿಸಿ ನೋಡುವರು. ಏಕೈಕ ಮಗನನ್ನು ಕಳೆದುಕೊಂಡಂತೆ ಅವನಿಗಾಗಿ ಗೋಳಾಡುವರು. ಕಾಲವಾದ ಜ್ಯೇಷ್ಠ ಪುತ್ರನಿಗಾಗಿ ಎಂಬಂತೆ ಅತ್ತು ಪ್ರಲಾಪಿಸುವರು.
11 : ಮೆಗಿದ್ದೋವಿನ ಕಣಿವೆಯಲ್ಲಿ ಆದಂತೆ, ಹದಾದ್-ರೀಮೋನ್‍ನಲ್ಲಿ ನಡೆದಂತೆ ಜೆರುಸಲೇಮಿನಲ್ಲಿ ಆ ದಿನದಂದು ದೊಡ್ಡ ಗೋಳಾಟವಾಗುವುದು.
12 : ನಾಡೆಲ್ಲ ಗೋಳಾಡುವುದು, ಒಂದೊಂದು ಕುಟುಂಬವೂ ಪ್ರತ್ಯೇಕವಾಗಿ ಗೋಳಾಡುವುದು. “ದಾವೀದ ವಂಶದ ಕುಟುಂಬವೇ ಬೇರೆಯಾಗಿ, ಅದರಲ್ಲಿನ ಗಂಡಸರು ಹೆಂಗಸರು ಬೇರೆಬೇರೆಯಾಗಿ; ನಾತಾನ ವಂಶದ ಕುಟುಂಬವೇ ಬೇರೆಯಾಗಿ, ಅದರಲ್ಲಿನ ಗಂಡಸರು ಹೆಂಗಸರು ಬೇರೆ ಬೇರೆಯಾಗಿ
13 : ಲೇವಿ ವಂಶದ ಕುಟುಂಬವೇ ಬೇರೆಯಾಗಿ, ಅದರಲ್ಲಿನ ಗಂಡಸರು ಹೆಂಗಸರು ಬೇರೆ ಬೇರೆಯಾಗಿ; ಶಿಮ್ಮಿಯ ಸಂತಾನದ ಕುಟುಂಬವೇ ಬೇರೆಯಾಗಿ, ಅದರಲ್ಲಿನ ಗಂಡಸರು ಹೆಂಗಸರು ಬೇರೆ ಬೇರೆಯಾಗಿ;
14 : ಮಿಕ್ಕ ಕುಟುಂಬಗಳೆಲ್ಲ ಬೇರೆಯಾಗಿ, ಅವುಗಳ ಗಂಡಸರು ಹೆಂಗಸರು ಬೇರೆಬೇರೆಯಾಗಿ; ಹೀಗೆ ಎಲ್ಲರು ಗೋಳಾಡುವರು ಬೇರೆಬೇರೆಯಾಗಿ.”

Holydivine