Zechariah - Chapter 10
Holy Bible

1 : ವಸಂತಕಾಲದಲ್ಲಿ ಮಳೆಗಾಗಿ ಸರ್ವೇಶ್ವರಸ್ವಾಮಿಗೆ ಪ್ರಾರ್ಥನೆ ಮಾಡಿರಿ. ಮೋಡ ಮಿಂಚುಗಳನ್ನು ಗಾಳಿಮಳೆಯನ್ನು ಉಂಟುಮಾಡುವವರು ಅವರೇ. ಸರ್ವರಿಗೂ ಹೊಲಗದ್ದೆಗಳಲ್ಲಿ ಪೈರುಪಚ್ಚೆಗಳನ್ನು ನೀಡುವವರು ಅವರೇ.
2 : ಗೃಹದೇವತೆಗಳು ನುಡಿಯುವುದು ಜೊಳ್ಳು; ಶಕುನ ಹೇಳುವವರ ಮಾತು ಸುಳ್ಳು. ಸ್ವಪ್ನಕಾರರ ಕನಸುಗಳು ಕಲ್ಪಿತ, ಅವರು ಹೇಳುವ ಸಮಾಧಾನ ವ್ಯರ್ಥ, ಈ ಕಾರಣ ಜನರು ಕುರಿಗಳಂತೆ ಚದರಿದ್ದಾರೆ; ಕುರುಬನಿಲ್ಲದೆ ಕಂಗೆಟ್ಟಿದ್ದಾರೆ.
3 : ಸರ್ವೇಶ್ವರ ಹೀಗೆನ್ನುತ್ತಾರೆ: “ಎಂತಲೇ ಕುರಿಗಾಹಿಗಳ ಮೇಲೆ ನನ್ನ ಕೋಪ ಭುಗಿಲೆದ್ದಿದೆ. ಆ ಮುಂದಾಳುಗಳ ಮೇಲೆ ನನ್ನ ದಂಡನೆ ಎರಗಲಿದೆ. ಸೇನಾಧೀಶ್ವರ ಸರ್ವೇಶ್ವರನಾದ ನಾನು ಜುದೇಯ ಕುಲವನ್ನು ನನ್ನ ಮಂದೆಯಂತೆ ಪರಿಪಾಲಿಸುವೆನು. ಅದನ್ನು ವೀರ ಯುದ್ಧಾಶ್ವವನ್ನಾಗಿ ಮಾಡಿಕೊಳ್ಳುವೆನು
4 : ಆ ಕುಲದಿಂದಲೇ ಮೂಲೆಗಲ್ಲು, ಗುಡಾರದ ಗೂಟ, ಯುದ್ಧದ ಬಿಲ್ಲುಗಳು ಬರುವುವು. ಆ ಕುಲದಿಂದಲೇ ಸಕಲ ಅಧಿಕಾರಿಗಳು ಹೊರಬರುವರು.
5 : ಇವರೆಲ್ಲರು ರಣವೀರರಂತೆ ಶತ್ರುಗಳನ್ನು ಬೀದಿಕೆಸರಿನಲ್ಲಿ ತುಳಿದು ಬಿಡುವರು. ಸರ್ವೇಶ್ವರ ತಮ್ಮ ಸಂಗಡ ಇದ್ದಾರೆಂದು ಧೈರ್ಯದಿಂದ ಯುದ್ಧಮಾಡುವರು, ಎದುರಿಸುವ ಕುದುರೆ ಸವಾರರನ್ನು ಭ್ರಾಂತಿಗೊಳಿಸುವರು.”
6 : “ಬಲಗೊಳಿಸುವೆನು ಯೆಹೂದ್ಯ ಕುಲವನು ಉದ್ಧರಿಸುವೆನು ಜೊಸೇಫನ ವಂಶವನು. ಕನಿಕರಿಸುವೆನು, ಮರಳಿಬರಮಾಡುವೆನು ಅವರನು ನಾನು ಕೈಬಿಟ್ಟವರಂತೆ ಇರಲಾರರವರು ಇನ್ನು. ಏಕೆನೆ ನಾನೇ ದೇವ ಸರ್ವೇಶ್ವರ ಅವರಿಗೆ ಕಿವಿಗೊಡುವೆನು ನಾನು ಅವರ ಕರೆಗೆ. ಸದುತ್ತರವೀಯುವೆನು ಅವರ ಮೊರೆಗೆ.
7 : ಬಲಾಢ್ಯ ವೀರರಾಗುವರು ಎಫ್ರಯಿಮ್ ಕುಲದವರು ದ್ರಾಕ್ಷಾರಸ ಕುಡಿದವರಂತೆ ಮನದಲ್ಲಿ ಸುಖಿಸುವರು. ಇದಕಂಡು ಸಂತೋಷಿಸುವರು ಅವರ ಕುವರಕುವರಿಯರು ಸರ್ವೇಶ್ವರಸ್ವಾಮಿಯಲಿ ಹೃತ್ಪೂರ್ವಕವಾಗಿ ಆನಂದಗೊಳ್ಳುವರು.
8 : “ಸಭೆಸೇರಿಸುವೆನವರನು ಕರೆದು ಸನ್ನೆಮಾಡಿ ವಿಮುಕ್ತಗೊಳಿಸುವೆನವರನು ನಿಸ್ಸಂದೇಹವಾಗಿ ಹಿಂದಿನಂತೆ ಮುಂದೆಯೂ ಬೆಳೆವರವರು ಸಮೃದ್ಧಿಯಾಗಿ.
9 : ಚದರಿದೆನಾದರೂ ಅವರನು ಅನ್ಯ ರಾಷ್ಟ್ರಗಳಲಿ ಸ್ಮರಿಸಿಕೊಳ್ಳುವರವರು ನನ್ನನು ದೂರದೇಶಗಳಲಿ ಹಿಂದಿರುಗುವರು ಸಂತಾನ ಸಮೇತ ಬದುಕಿ ಬಾಳಿ.
10 : ಕರೆತರುವೆನವರನು ಈಜಿಪ್ಟ್, ಅಸ್ಸೀರಿಯ ನಾಡುಗಳಿಂದ ಗಿಲ್ಯಾದ್, ಲೆಬೊನೇನ್‍ಗಳಲ್ಲವರು ಬಂದು ಸೇರುವುದರಿಂದ ತುಂಬಿತುಳುಕುವುವು ಆ ನಾಡುಗಳು ಜನಸ್ತೋಮದಿಂದ.
11 : ದಾಟಿಬರುವರವರು ಕಷ್ಟವೆಂಬ ಕಡಲನು ಛೇದಿಸಿ ಬಿಡುವೆನು ಅಲ್ಲಕಲ್ಲೋಲ ಸಮುದ್ರವನು. ತಳದ ತನಕ ಒಣಗಿಹೋಗುವುದು ನೈಲ್ ನದಿಯು ಕುಗ್ಗಿಹೋಗುವುದು ಅಸ್ಸೀರಿಯಾದ ಗರ್ವವು ತಪ್ಪಿಹೋಗುವುದು ಈಜಿಪ್ಟಿನ ರಾಜದರ್ಪವು.
12 : ಬಲಿಷ್ಠರಾಗುವರಾ ಜನರು ಸರ್ವೇಶ್ವರನಲಿ ಹೆಚ್ಚಳಪಡುವರು ಆತನ ನಾಮದಲಿ,” ನುಡಿದಿಹನು ಸರ್ವೇಶ್ವರ ಈ ರೀತಿಯಲಿ.

Holydivine