Joshua - Chapter 9
Holy Bible

1 : ಜೋರ್ಡನ್ ಹೊಳೆಯ ಆಚೆ ಬೆಟ್ಟದ ಪ್ರದೇಶ, ಕಣಿವೆ ಪ್ರದೇಶ, ಲೆಬನೋನಿನ ಎದುರಿಗಿರುವ ಮಹಾಸಾಗರದ ತೀರಪ್ರದೇಶ ಇವುಗಳಲ್ಲಿ ವಾಸವಾಗಿದ್ದ ಅಮೋರಿಯ, ಹಿತ್ತಿಯ, ಕಾನಾನ್, ಪೆರಿಜ್ಜೀಯ, ಹಿವ್ವಿಯ, ಯೆಬೂಸಿಯ ರಾಜರು ನಡೆದ ಸಂಗತಿಯನ್ನು ಕೇಳಿದರು.
2 : ಯೆಹೋಶುವನಿಗೂ ಇಸ್ರಯೇಲರಿಗೂ ವಿರುದ್ಧ ಯುದ್ಧಮಾಡಬೇಕೆಂದು ಒಮ್ಮನಸ್ಸಿನಿಂದ ಕೂಡಿಕೊಂಡರು.
3 : ಜೆರಿಕೋದವರನ್ನು ಮತ್ತು ಆಯಿ ಜನರನ್ನು ಯೆಹೋಶುವನು ಸಂಹರಿಸಿದ ಸುದ್ದಿ ಗಿಬ್ಯೋನಿನ ನಿವಾಸಿಗಳಿಗೆ ಮುಟ್ಟಿತು.
4 : ಅವರು ಒಂದು ಉಪಾಯವನ್ನು ಹೂಡಿದರು. ಅದೇನೆಂದರೆ - ಅವರು ತಮ್ಮ ಕತ್ತೆಗಳ ಮೇಲೆ ಹಳೆಯ ಗೋಣಿ ತಟ್ಟುಗಳನ್ನು ಹಾಕಿ ಅವುಗಳ ಮೇಲೆ ತೇಪೆ ಹಾಕಿದ ದ್ರಾಕ್ಷಾರಸದ ಹಳೆಯ ಬುದ್ದಲಿಗಳನ್ನು ಹೇರಿದರು.
5 : ಹರಿದುಹೋಗಿದ್ದ ಹಳೆಯ ಕೆರಗಳನ್ನು ಮೆಟ್ಟಿಕೊಂಡರು. ಹಳೆಯ ಬಟ್ಟೆಬರೆಗಳನ್ನು ಹಾಕಿಕೊಂಡರು. ಒಣರೊಟ್ಟಿ ಚೂರುಗಳನ್ನು ಬುತ್ತಿಯಾಗಿ ಕಟ್ಟಿಕೊಂಡರು.
6 : ತಾವೂ ರಾಯಭಾರಿಗಳೆಂದು ಗಿಲ್ಗಾಲಿನಲ್ಲಿದ್ದ ಯೆಹೋಶುವನ ಪಾಳೆಯಕ್ಕೆ ಬಂದರು. ಅವನಿಗೂ ಇಸ್ರಯೇಲರಿಗೂ “ನಾವು ದೂರದೇಶದಿಂದ ಬಂದವರು. ನೀವು ನಮ್ಮ ಸಂಗಡ ಒಂದು ಒಪ್ಪಂದ ಮಾಡಿಕೊಳ್ಳಿ,” ಎಂದು ಕೇಳಿಕೊಂಡರು.
7 : ಆಗ ಇಸ್ರಯೇಲರು ಹಿವ್ವಿಯರಾದ ಅವರಿಗೆ, “ಬಹುಶಃ ನೀವು ನಮ್ಮ ನಾಡಿನ ನಿವಾಸಿಗಳೇ ಆಗಿರಬಹುದು. ಆದುದರಿಂದ ನಾವು ನಿಮ್ಮ ಸಂಗಡ ಒಪ್ಪಂದ ಮಾಡಿಕೊಳ್ಳುವುದು ಹೇಗೆ?” ಎಂದು ಉತ್ತರಿಸಿದರು.
8 : ಅವರು ಯೆಹೋಶುವನಿಗೆ, “ನಾವು ನಿಮ್ಮ ಸೇವಕರು” ಎಂದರು. “ನೀವು ಯಾರು? ಎಲ್ಲಿಯವರು?” ಎಂದು ಆತ ವಿಚಾರಿಸಲು
9 : ಅವರು, “ನಿಮ್ಮ ಸೇವಕರಾದ ನಾವು ನಿಮ್ಮ ದೇವರಾದ ಸರ್ವೇಶ್ವರನ ನಾಮ ಮಹತ್ತನ್ನು ಕೇಳಿ ಬಹುದೂರ ದೇಶದಿಂದ ಬಂದಿದ್ದೇವೆ. ಆ ನಿಮ್ಮ ದೇವರು ಈಜಿಪ್ಟಿನಲ್ಲಿ ನಡೆಸಿದ ಮಹತ್ಕಾರ್ಯಗಳ ಸುದ್ದಿಯನ್ನು ನಮ್ಮ ಹಿರಿಯರೂ ದೇಶ ನಿವಾಸಿಗಳೂ ಕೇಳಿದ್ದಾರೆ.
10 : ಹೆಷ್ಬೋನಿನ ಅರಸ ಸೀಹೋನ್ ಮತ್ತು ಅಷ್ಟರೋತಿನಲ್ಲಿ ವಾಸವಾಗಿದ್ದ ಬಾಷಾನಿನ ಅರಸ ಓಗ್ ಎಂಬ ಈ ಇಬ್ಬರು ಅಮೋರಿಯರಿಗೆ ಆ ದೇವರು ಮಾಡಿದ್ದೆಲ್ಲವನ್ನು ಕೇಳಿದ್ದಾರೆ.
11 : ಅವರು ನಮ್ಮನ್ನು ಇಲ್ಲಿಗೆ ಕಳಿಸುತ್ತಾ, ‘ನೀವು ಪ್ರಯಾಣಕ್ಕಾಗಿ ಬುತ್ತಿ ಕಟ್ಟಿಕೊಂಡು ಹೋಗಿ ಇಸ್ರಯೇಲರನ್ನು ಎದುರುಗೊಳ್ಳಿ - ನಾವು ನಿಮ್ಮ ಸೇವಕರು, ನೀವು ನಮ್ಮ ಸಂಗಡ ಒಪ್ಪಂದ ಮಾಡಿಕೊಳ್ಳಿ ಎಂದು ವಿನಂತಿಸಿ,’ ಎಂದು ಹೇಳಿದರು.
12 : ನಾವು ನಿಮ್ಮನ್ನು ಭೇಟಿಯಾಗುವುದಕ್ಕಾಗಿ ಮನೆಬಿಟ್ಟು ಹೊರಟಾಗ ಪ್ರಯಾಣಕ್ಕೆಂದು ತೆಗೆದುಕೊಂಡ ಈ ರೊಟ್ಟಿ ಬಿಸಿಯಾಗಿತ್ತು. ಈಗ ಒಣಗಿ ಚೂರು ಚೂರಾಗಿದೆ ನೋಡಿ.
13 : ದ್ರಾಕ್ಷಾರಸ ತುಂಬಿಸಿಕೊಂಡಿದ್ದ ಈ ಬುದ್ಧಲಿಗಳು ಹೊಸದಾಗಿದ್ದವು. ಈಗ ಹರಿದುಹೋಗಿವೆ. ನಮ್ಮ ಬಟ್ಟೆಬರೆಗಳು ಹಾಗೂ ಕೆರಗಳು ದೀರ್ಘ ಪ್ರಯಾಣದಿಂದ ಸವೆದು ಹೋಗಿವೆ,” ಎಂದು ವಿವರಿಸಿದರು.
14 : ಆಗ ಇಸ್ರಯೇಲರು ಅವರ ಬುತ್ತಿಯಲ್ಲಿ ಸ್ವಲ್ಪ ತೆಗೆದುಕೊಂಡರು. ಆದರೆ ಸರ್ವೇಶ್ವರ ಸ್ವಾಮಿಯ ಅಪ್ಪಣೆಯನ್ನು ಕೇಳಲಿಲ್ಲ.
15 : ಯೆಹೋಶುವ ಅವರೊಡನೆ, “ನಿಮ್ಮ ಜೀವವನ್ನು ಕಾಪಾಡುತ್ತೇವೆ” ಎಂದು ಶಾಂತಿಸಂಧಾನ ಮಾಡಿಕೊಂಡನು. ಸಭೆಯ ನಾಯಕರೂ ಅಂತೆಯೇ ಪ್ರಮಾಣ ಮಾಡಿದರು.
16 : ಈ ಒಪ್ಪಂದವಾದ ಮೂರು ದಿನಗಳ ಮೇಲೆ ಅವರು ತಮ್ಮ ನೆರೆಯವರೆಂದೂ ತಮ್ಮ ಮಧ್ಯೆ ವಾಸಿಸುವವರೆಂದೂ ಇಸ್ರಯೇಲರಿಗೆ ಗೊತ್ತಾಯಿತು.
17 : ಹೇಗೆಂದರೆ ಮೂರನೆಯ ದಿನದಂದು ಇಸ್ರಯೇಲರು ಹೊರಟು ಗಿಬ್ಯೋನ್, ಕೆಫೀರಾ, ಬೇರೋತ್, ಕಿರ್ಯತ್ಯಾರೀಮ್ ಎಂಬ ಊರುಗಳನ್ನು ಸೇರಿದರು. ಆಗ ಆ ಊರುಗಳು ಆ ಜನರದ್ದೇ ಎಂದು ಗೊತ್ತಾಯಿತು.
18 : ಸಭೆಯ ನಾಯಕರು ಇಸ್ರಯೇಲ್ ದೇವರಾದ ಸರ್ವೇಶ್ವರನ ಹೆಸರಿನಲ್ಲಿ ಆ ಜನರಿಗೆ ಪ್ರಮಾಣ ಮಾಡಿದ್ದರಿಂದ ಇಸ್ರಯೇಲರು ಅವರನ್ನು ಕೊಲ್ಲಲಿಲ್ಲ. ಆದರೆ ಸಭಿಕರೆಲ್ಲರು ಅವರನ್ನು ಕೊಲ್ಲಲಿಲ್ಲ. ಆದರೆ ಸಭಿಕರೆಲ್ಲರು ತಮ್ಮ ನಾಯಕರಿಗೆ ವಿರುದ್ಧ ಗೊಣಗುಟ್ಟಿದರು.
19 : ಆಗ ನಾಯಕರೆಲ್ಲರು ಸಭೆಯ ಎಲ್ಲ ಸದಸ್ಯರಿಗೆ, “ನಾವು ಇಸ್ರಯೇಲ್ ದೇವರಾದ ಸರ್ವೇಶ್ವರನ ಹೆಸರಿನಲ್ಲಿ ಅವರಿಗೆ ಪ್ರಮಾಣ ಮಾಡಿದ್ದರಿಂದ ಅವರನ್ನು ಮುಟ್ಟಲಾಗದು.
20 : ನಾವು ಇಟ್ಟ ಆಣೆಯ ನಿಮಿತ್ತ ದೇವರ ಕೋಪ ನಮ್ಮ ಮೇಲೆ ಬಾರದಂತೆ ಅವರನ್ನು ಜೀವದಿಂದ ಉಳಿಸಬೇಕು. ನಾವು ಹೀಗೆ ಮಾಡೋಣ: ಅವರನ್ನು ಬದುಕಲು ಬಿಟ್ಟುಬಿಡಿ.
21 : ಆದರೆ ನಮ್ಮ ಜನರಿಗೆ ಅವರು ಕಟ್ಟಿಗೆ ಕಡಿಯುವವರೂ ನೀರು ತರುವವರೂ ಆಗಿರಲಿ,” ಎಂದು ಹೇಳಿದರು. ನಾಯಕರ ಮಾತಿನಂತೆಯೇ ಆಯಿತು.
22 : ಯೆಹೋಶುವನು ಗಿಬ್ಯೋನ್ಯರನ್ನು ಕರೆಸಿ, “ನೀವು ನಮ್ಮ ನಡುವೆ ವಾಸಿಸುವವರಾಗಿದ್ದರೂ ಬಹು ದೂರದವರೆಂದು ಹೇಳಿ ನಮ್ಮನ್ನು ವಂಚಿಸಿದ್ದೇಕೆ?
23 : ಇದರಿಂದಾಗಿ ನೀವು ಶಾಪಗ್ರಸ್ತರು! ನೀವು ಯಾವಾಗಲೂ ಊಳಿಗದವರಾಗಿದ್ದು, ನನ್ನ ದೇವರ ಮಂದಿರಕ್ಕೆ ಕಟ್ಟಿಗೆ ಕಡಿಯುವವರೂ ನೀರು ತರುವವರೂ ಆಗಿರಬೇಕು,” ಎಂದನು.
24 : ಅವರು ಯೆಹೋಶುವನಿಗೆ, “ನಿಮ್ಮ ದೇವರಾದ ಸರ್ವೇಶ್ವರ ತಮ್ಮ ದಾಸ ಮೋಶೆಗೆ, ‘ನಾನು ನಿಮಗೆ ಈ ದೇಶವನ್ನೆಲ್ಲ ಕೊಡುವಾಗ ನೀವು ಇದರ ನಿವಾಸಿಗಳನ್ನೆಲ್ಲಾ ಸಂಹರಿಸಬೇಕು,’ ಎಂದು ಆಜ್ಞಾಪಿಸಿದ್ದಾರೆಂದು ಕೇಳಿ ನಮ್ಮ ಪ್ರಾಣ ತೆಗೆಯುವಿರೆಂದು ಹೆದರಿ ಹೀಗೆ ಮಾಡಿದೆವು.
25 : ಇಗೋ, ಈಗ ನಾವು ನಿಮ್ಮ ಕೈಯಲ್ಲಿ ಇದ್ದೇವೆ. ನಿಮಗೆ ಯಾವುದು ಒಳ್ಳೆಯದು, ನ್ಯಾಯವಾದುದು ಎಂದು ತೋರುತ್ತದೋ ಅದರಂತೆ ನಮಗೆ ಮಾಡಿ,” ಎಂದು ಉತ್ತರಕೊಟ್ಟರು.
26 : ಯೆಹೋಶುವನು ತಾನು ಮೊದಲೇ ಹೇಳಿದಂತೆ ಮಾಡಿದನು. ಅವರನ್ನು ಇಸ್ರಯೇಲರ ಕೈಯಿಂದ ಹತರಾಗದಂತೆ ತಪ್ಪಿಸಿದನು.
27 : ಸಭೆಗೂ ಸರ್ವೇಶ್ವರ ಆಯ್ದುಕೊಂಡ ಸ್ಥಳದಲ್ಲಿ ಕಟ್ಟಲಾಗುವ ಬಲಿಪೀಠಕ್ಕೂ ಕಟ್ಟಿಗೆ ಕಡಿಯುವವರನ್ನಾಗಿ ಹಾಗೂ ನೀರು ತರುವವರನ್ನಾಗಿ ನೇಮಿಸಿದನು. ಅವರು ಇಂದಿನವರೆಗೂ ಅದೇ ಊಳಿಗದಲ್ಲಿದ್ದಾರೆ.

Holydivine