Joshua - Chapter 11
Holy Bible

1 : ಹಾಚೋರಿನ ಅರಸ ಯಾಬೀನನು ಇದನ್ನೆಲ್ಲಾ ಕೇಳಿ ಯೋಬಾಬನೆಂಬ ಮದೋನಿನ ಅರಸನಿಗೂ ಶಿಮ್ರೋನಿನ ಅರಸನಿಗೂ ಹಾಗು ಅಕ್ಷಾಫಿನ ಅರಸನಿಗೂ ಕರೆಕಳಿಸಿದನು.
2 : ಉತ್ತರದಿಕ್ಕಿನ ಪರ್ವತಪ್ರದೇಶ, ಕಿನ್ನೆರೋತ್ ಸಮುದ್ರದ ದಕ್ಷಿಣದಲ್ಲಿನ ಕಣಿವೆ ಪ್ರದೇಶ, ಇಳಿಜಾರು ಪ್ರದೇಶ, ದೋರ್ ಊರಿನ ಪಶ್ಚಿಮದಲ್ಲಿದ್ದ ಮಲೆನಾಡಿನ ಪ್ರದೇಶ, ಇವುಗಳ ಅರಸರಿಗೂ
3 : ಪೂರ್ವ ಪಶ್ಚಿಮಗಳಲ್ಲಿರುವ ಕಾನಾನ್ಯರು, ಅಮೋರಿಯರು, ಹಿತ್ತಿಯರು, ಪೆರಿಜ್ಜೀಯರು, ಮಲೆನಾಡಿನ ಪ್ರದೇಶದಲ್ಲಿದ್ದ ಯೆಬೂಸಿಯರು, ಹೆರ್ನೋನಿನ ಬುಡದಲ್ಲಿ ಮಿಚ್ಪಾ ನಾಡಿನಲ್ಲಿದ್ದ ಹಿವ್ವಿಯರು ಇವರಿಗೂ ಹೇಳಿ ಕಳಿಸಿದನು.
4 : ಅವರು ಒಡನೆ ಬಹುರಥಾಶ್ವಗಳಿಂದ ಕೂಡಿದ್ದ ತಮ್ಮ ಸರ್ವಸೈನ್ಯಗಳನ್ನು ತೆಗೆದುಕೊಂಡು ಹೊರಟರು. ಸೈನಿಕರು ಸಮುದ್ರ ತೀರದ ಮರಳಿನಂತೆ ಅಸಂಖ್ಯರಾಗಿದ್ದರು.
5 : ಇಸ್ರಯೇಲರೊಡನೆ ಯುದ್ಧಮಾಡಲು ಅರಸರೆಲ್ಲರು ಒಟ್ಟುಗೂಡಿ ಮೇರೋಮ್ ಜಲಾಶಯದ ಬಳಿ ಇಳಿದುಕೊಂಡರು.
6 : ಆಗ ಸರ್ವೇಶ್ವರಸ್ವಾಮಿ ಯೆಹೋಶುವಿಗೆ, “ನೀನು ಅವರಿಗೆ ಹೆದರಬೇಡ; ನಾಳೆ ಇದೇ ವೇಳೆಗೆ ಅವರನ್ನು ಇಸ್ರಯೇಲರಿಗೆ ಒಪ್ಪಿಸುವೆನು. ಇಸ್ರಯೇಲರು ಅವರನ್ನು ಹತಿಸಿಬಿಡುವರು. ನೀನು ಅವರ ಕುದುರೆಗಳ ಹಿಂಗಾಲಿನ ನರಗಳನ್ನು ಕಡಿದು ರಥಗಳನ್ನು ಸುಟ್ಟುಬಿಡಬೇಕು,” ಎಂದರು.
7 : ಯೆಹೋಶುವನು ತನ್ನ ಎಲ್ಲ ಯೋಧರೊಡನೆ ಹೊರಟು ಮೇರೋಮ್ ಜಲಾಶಯದ ಬಳಿಯಲ್ಲಿದ್ದ ಶತ್ರುಗಳ ಮೇಲೆ ಬಿದ್ದನು.
8 : ಸರ್ವೇಶ್ವರ ಅವರನ್ನು ಇಸ್ರಯೇಲರ ಕೈವಶ ಮಾಡಿದರು. ಇವರು ಅವರನ್ನು ದೊಡ್ಡ ಚೀದೋನ್ ಹಾಗು ಮಿಸ್ರೆ ಫೋತ್ಮಯಿಮ್ ಎಂಬ ಊರುಗಳವರೆಗೂ ಮತ್ತು ಪೂರ್ವ ದಿಕ್ಕಿನಲ್ಲಿರುವ ಮಿಚ್ಫೆಯ ಬಯಲಿನವರೆಗೂ ಹಿಂದಟ್ಟಿ, ಒಬ್ಬನೂ ಉಳಿಯದಂತೆ ಸದೆಬಡಿದರು.
9 : ಯೆಹೋಶುವನು ಸರ್ವೇಶ್ವರನ ಅಪ್ಪಣೆಗನುಸಾರವಾಗಿ ಅವರ ಕುದುರೆಗಳ ಹಿಂಗಾಲಿನ ನರಗಳನ್ನು ಕಡಿದು ರಥಗಳನ್ನು ಸುಟ್ಟುಬಿಟ್ಟನು.
10 : ಕೂಡಲೆ ಯೆಹೋಶುವನು ಹಿಂದಿರುಗಿ ಹಾಚೋರನ್ನೂ ಅದರ ಅರಸನನ್ನೂ ಕತ್ತಿಯಿಂದ ಸಂಹರಿಸಿದನು. ಏಕೆಂದರೆ ಹಾಚೋರ್ ಪೂರ್ವಕಾಲದಲ್ಲಿ ಆ ರಾಜ್ಯಗಳಲ್ಲೆಲ್ಲಾ ಶ್ರೇಷ್ಠವಾದುದು.
11 : ಇಸ್ರಯೇಲರು ಅದರಲ್ಲಿದ್ದ ಜನರನ್ನೆಲ್ಲಾ ಕತ್ತಿಗೆ ಈಡಾಗಿಸಿ ಹಾಚೋರ್ ನಗರವನ್ನು, ಪ್ರಾಣಿಯೊಂದೂ ಉಳಿಯದಂತೆ ಸುಟ್ಟುಬಿಟ್ಟರು.
12 : ಯೆಹೋಶುವನು ಆ ಬೇರೆ ಅರಸರನ್ನು, ಅವರ ಎಲ್ಲ ನಗರಗಳನ್ನು ಹಿಡಿದು ಸರ್ವೇಶ್ವರನ ದಾಸ ಮೋಶೆಯ ಆಜ್ಞೆಯಂತೆ ಅವರನ್ನು ಕತ್ತಿಯಿಂದ ನಾಶಮಾಡಿದನು.
13 : ಯೆಹೋಶುವನು ಸುಟ್ಟ ಹಾಚೋರ್ ಒಂದನ್ನು ಬಿಟ್ಟರೆ ಇಸ್ರಯೇಲರು ಮಲೆನಾಡಿನ ಬೇರೆ ಯಾವ ನಗರವನ್ನೂ ಸುಡಲಿಲ್ಲ.
14 : ಆಗ ಅವನೂ ಅವನ ಸಂಗಡಿಗರೂ ಹೊಲದ ಮಧ್ಯದಲ್ಲಿ ನಿಂತುಕೊಂಡು ಫಿಲಿಷ್ಟಿಯರಿಗೆ ವಿರೋಧವಾಗಿ ಕಾದಾಡಿದರು. ಸರ್ವೇಶ್ವರ ಅವನಿಗೆ ಮಹಾಜಯವನ್ನು ದಯಪಾಲಿಸಿದರು..
15 : ಸರ್ವೇಶ್ವರನ ದಾಸ ಮೋಶೆ, ದೇವರು ತನಗೆ ಹೇಳಿದ್ದನ್ನೆಲ್ಲಾ ಯೆಹೋಶುವಿಗೆ ಹೇಳಿದ್ದನು. ಅದರಂತೆಯೇ ಯೆಹೋಶುವ ಮಾಡಿದನು. ಸರ್ವೇಶ್ವರ ಮೋಶೆಯ ಮುಖಾಂತರ ಆಜ್ಞಾಪಿಸಿದ್ದರಲ್ಲಿ ಯೆಹೋಶುವ ಒಂದನ್ನೂ ವಿೂರಲಿಲ್ಲ. ಮೋಶೆಯಿತ್ತ ಆಜ್ಞಾಪಾಲನೆ
16 : ಹೀಗೆ ಮಲೆನಾಡಿನ ಪ್ರದೇಶ, ದಕ್ಷಿಣ ಪ್ರಾಂತ್ಯ, ಗೋಷೆನ್ ನಾಡು, ಇಳಿಜಾರಿನ ಪ್ರದೇಶ, ಕಣಿವೆ ಪ್ರದೇಶ, ಇಸ್ರಯೇಲ್ ನಾಡಿನ ಪರ್ವತ ಪ್ರಾಂತ್ಯ, ಅದಕ್ಕೆ ಸೇರಿದ ಇಳಿಜಾರಿನ ಪ್ರದೇಶ ಇವೆಲ್ಲವೂ ಯೆಹೋಶುವನಿಗೆ ಸ್ವಾಧೀನವಾದವು.
17 : ಅವನು ಸೇಯೀರಿನ ಹಾದಿಯಲ್ಲಿದ್ದ ಹಾಲಾಕ್ ಬೆಟ್ಟದಿಂದ ಹೆರ್ಮೋನಿನ ಬುಡದಲ್ಲಿ ಲೆಬನೋನ್ ಕಣಿವೆಯಲ್ಲಿರುವ ಬಾಲ್ಗಾದ್ ನಗರದವರೆಗೂ ಇರುವ ಪ್ರದೇಶವನ್ನೆಲ್ಲಾ ತೆಗೆದುಕೊಂಡು ಅದರ ಅರಸರನ್ನೆಲ್ಲಾ ಹಿಡಿದು ಸಂಹರಿಸಿಬಿಟ್ಟನು.
18 : ಯೆಹೋಶುವ ಈ ಎಲ್ಲಾ ಅರಸರೊಡನೆ ಬಹು ದಿನಗಳ ತನಕ ಯುದ್ಧ ಮಾಡಿದನು.
19 : ಗಿಬ್ಯೋನಿನ ನಿವಾಸಿಗಳಾದ ಹಿವ್ವಿಯರ ಹೊರತು ಯಾವ ನಗರದವರೂ ಇಸ್ರಯೇಲರೊಡನೆ ಒಪ್ಪಂದ ಮಾಡಿಕೊಳ್ಳಲಿಲ್ಲ. ಎಲ್ಲರನ್ನೂ ಯುದ್ಧದಿಂದಲೇ ವಶಮಾಡಿಕೊಳ್ಳಬೇಕಾಯಿತು.
20 : ಏಕೆಂದರೆ ಸರ್ವೇಶ್ವರ ಅವರ ಹೃದಯಗಳನ್ನು ಕಠಿಣಪಡಿಸಿ ಯುದ್ಧಕ್ಕೆ ಬರಮಾಡಿದ್ದರು. ಸರ್ವೇಶ್ವರ ಮೋಶೆಗೆ ಆಜ್ಞಾಪಿಸಿದಂತೆ ಇಸ್ರಯೇಲರು ಅವರೆಲ್ಲರನ್ನು ಕರುಣೆ ಇಲ್ಲದೆ ಸಂಹರಿಸಿದರು.
21 : ಅದೇ ಕಾಲದಲ್ಲಿ ಯೆಹೋಶುವನು ಹೆಬ್ರೋನ್, ದೆಬೀರ್ ಹಾಗೂ ಅನಾಬ್ ಎಂಬ ಊರುಗಳಲ್ಲೂ, ಜುದೇಯ ಮತ್ತು ಇಸ್ರಯೇಲ್ ಪ್ರಾಂತ್ಯಗಳ ಬೆಟ್ಟಗುಡ್ಡಗಳಲ್ಲೂ ಇದ್ದ ‘ಅನಾಕಿಮ್’ ಜನರನ್ನು ನಾಶಮಾಡಿ ಅವರ ನಗರಗಳನ್ನು ಹಾಳುಮಾಡಿದನು.
22 : ಇಸ್ರಯೇಲರ ಪ್ರಾಂತ್ಯದಲ್ಲಿ ಜನರಾರೂ ಉಳಿಯಲಿಲ್ಲ. ಗಾಜಾ, ಗತೂರು, ಅಷ್ಡೋದ್ ಎಂಬ ಊರುಗಳಲ್ಲಿ ಮಾತ್ರ ಕೆಲವರು ಉಳಿದರು.
23 : ಸರ್ವೇಶ್ವರ ಮೋಶೆಯ ಮುಖಾಂತರ ವಾಗ್ದಾನ ಮಾಡಿದ್ದ ಪ್ರದೇಶವನ್ನೆಲ್ಲಾ ಯೆಹೋಶುವ ಹಿಡಿದುಕೊಂಡನು ಇಸ್ರಯೇಲ್ ಕುಲಭಾಗಗಳಿಗನುಸಾರ ಅದನ್ನು ಹಂಚಿಕೊಟ್ಟನು. ಯುದ್ಧ ನಿಂತಿತು. ದೇಶದಲ್ಲೆಲ್ಲಾ ಶಾಂತಿಸಮಾಧಾನ ನೆಲೆಸಿತು.

Holydivine