Joshua - Chapter 4
Holy Bible

1 : ಜನರೆಲ್ಲರು ಜೋರ್ಡನಿನ ಆಚೆ ಕಡೆಗೆ ಸೇರಿದ ಮೇಲೆ ಸರ್ವೇಶ್ವರಸ್ವಾಮಿ ಯೆಹೋಶುವನಿಗೆ ಹೀಗೆಂದರು:
2 : “ಜನರಲ್ಲಿ ಕುಲಕ್ಕೆ ಒಬ್ಬನಂತೆ ಹನ್ನೆರಡು ಮಂದಿಯನ್ನು ಆರಿಸಿಕೊ.
3 : ಅವರಿಗೆ, ‘ನೀವು ಜೋರ್ಡನಿನ ಮಧ್ಯದಲ್ಲಿ ಯಾಜಕರು ನಿಂತ ಸ್ಥಳದಿಂದ ಹನ್ನೆರಡು ಕಲ್ಲುಗಳನ್ನು ಎತ್ತಿ, ಅವುಗಳನ್ನು ನಿಮ್ಮ ಸಂಗಡ ಈಚೆ ದಡಕ್ಕೆ ತಂದು ನೀವು ಈ ರಾತ್ರಿ ತಂಗುವ ಸ್ಥಳದಲ್ಲಿ ನಿಲ್ಲಿಸಿ’ ಎಂದು ಆಜ್ಞಾಪಿಸು,” ಎಂದರು.
4 : ಆಗ ಯೆಹೋಶುವನು ತಾನು ಇಸ್ರಯೇಲರಿಂದ ಕುಲಕ್ಕೆ ಒಬ್ಬನಂತೆ ಆರಿಸಿಕೊಂಡ ಹನ್ನೆರಡು ಮಂದಿಯನ್ನು ಕರೆದು ಅವರಿಗೆ,
5 : “ನೀವು ನಮ್ಮ ದೇವರಾದ ಸರ್ವೇಶ್ವರನ ಮಂಜೂಷದ ಮುಂದಾಗಿ ಜೋರ್ಡನಿನ ಮಧ್ಯಕ್ಕೆ ಹೋಗಿ ಇಸ್ರಯೇಲ್ ಕುಲಗಳ ಸಂಖ್ಯೆಗೆ ಸರಿಯಾಗಿ ಪ್ರತಿಯೊಬ್ಬನು ಒಂದೊಂದು ಕಲ್ಲನ್ನು ಹೆಗಲ ಮೇಲೆ ಹೊತ್ತುಕೊಂಡು ಬನ್ನಿ.
6 : ಅವು ನಿಮ್ಮ ಮಧ್ಯೆ ಸ್ಮಾರಕ ಆಗಿರುವುವು. ಮುಂದಿನ ಕಾಲದಲ್ಲಿ ನಿಮ್ಮ ಮಕ್ಕಳು, ‘ಈ ಕಲ್ಲುಗಳು ಏನನ್ನು ಸೂಚಿಸುತ್ತವೆ?’ ಎಂದು ಕೇಳುವಾಗ ನೀವು ಆವರಿಗೆ,
7 : ಸರ್ವೇಶ್ವರನ ಒಡಂಬಡಿಕೆಯ ಮಂಜೂಷವು ಜೋರ್ಡನನ್ನು ದಾಟುವಾಗ ಅದರ ಮುಂದೆ ಜೋರ್ಡನಿನ ನೀರು ನಿಂತುಹೋಯಿತು,’ ಎಂದು ಹೇಳಿರಿ. ಅದರ ನೀರು ನಿಂತುಹೋಯಿತೆಂಬುದಕ್ಕೆ ಈ ಕಲ್ಲುಗಳು ಇಸ್ರಯೇಲರಿಗೆ ಚಿರಸ್ಮಾರಕಗಳಾಗಿರುವುವು,” ಎಂದು ಹೇಳಿದನು.
8 : ಇಸ್ರಯೇಲರು ಯೆಹೋಶುವನು ಆಜ್ಞಾಪಿಸಿದಂತೆಯೇ ಮಾಡಿದರು. ಸರ್ವೇಶ್ವರಸ್ವಾಮಿ ಯೆಹೋಶುವನಿಗೆ ಹೇಳಿದ ಪ್ರಕಾರ ಅವರು ಇಸ್ರಯೇಲರ ಕುಲಸಂಖ್ಯೆಗೆ ಅನುಸಾರವಾಗಿ ಜೋರ್ಡನಿನ ಮಧ್ಯದಿಂದ ಹನ್ನೆರಡು ಕಲ್ಲುಗಳನ್ನು ಎತ್ತಿ ತಮ್ಮ ಬಿಡಾರದ ಸ್ಥಳಕ್ಕೆ ತಂದು ಅಲ್ಲಿ ಅವುಗಳನ್ನು ನಿಲ್ಲಿಸಿದರು.
9 : ಇದಲ್ಲದೆ ಯೆಹೋಶುವನು ಹನ್ನೆರಡು ಕಲ್ಲುಗಳನ್ನು ತೆಗೆದುಕೊಂಡು, ಜೋರ್ಡನಿನ ಮಧ್ಯೆ ಒಡಂಬಡಿಕೆಯ ಮಂಜೂಷವನ್ನು ಹೊತ್ತ ಯಾಜಕರು ನಿಂತಿದ್ದ ಸ್ಥಳದಲ್ಲಿ ನಿಲ್ಲಿಸಿದನು. ಅವು ಇಂದಿನವರೆಗೂ ಅಲ್ಲೇ ಇವೆ.
10 : ಮೋಶೆ ಆಜ್ಞಾಪಿಸಿದಂತೆ ಯೆಹೋಶುವನು ಜನರಿಗೆ ತಿಳಿಸಿದ ಸರ್ವೇಶ್ವರನ ಅಪ್ಪಣೆಗಳನ್ನೆಲ್ಲ ಅವರು ನೆರವೇರಿಸುವ ತನಕ ಮಂಜೂಷವನ್ನು ಹೊತ್ತ ಯಾಜಕರು ಜೋರ್ಡನಿನ ಮಧ್ಯದಲ್ಲೇ ನಿಂತರು.
11 : ಜನರು ಬೇಗನೆ ನದಿ ದಾಟಿದರು. ಅವರೆಲ್ಲರು ಆಚೆಗೆ ಸೇರಿದ ಮೇಲೆ ಯಾಜಕರು ಸರ್ವೇಶ್ವರನ ಮಂಜೂಷದೊಡನೆ ನದಿ ದಾಟಿ ಜನರ ಮುಂದುಗಡೆಯೇ ಹೋದರು.
12 : ರೂಬೇನ್ಯರು, ಗಾದ್ಯರು ಹಾಗೂ ಮನಸ್ಸೆ ಕುಲದ ಅರ್ಧ ಜನರು ಮೋಶೆ ತಮಗೆ ಆಜ್ಞಾಪಿಸಿದಂತೆ ಯುದ್ಧ ಸನ್ನದ್ಧರಾಗಿ ಮಿಕ್ಕ ಇಸ್ರಯೇಲರಿಗಿಂತ ಮುಂದಾಗಿ ಹೊರಟು ನದಿ ದಾಟಿದರು.
13 : ಸುಮಾರು ನಾಲ್ವತ್ತು ಸಾವಿರ ಯೋಧರಿಂದ ಕೂಡಿದ ಅವರು ಸರ್ವೇಶ್ವರನ ಸಮ್ಮುಖದಲ್ಲಿ ನದಿ ದಾಟಿ ಯುದ್ಧ ಮಾಡುವುದಕ್ಕಾಗಿ ಜೆರಿಕೋವಿನ ಬಯಲಿಗೆ ಬಂದರು.
14 : ಆ ದಿನ ಸರ್ವೇಶ್ವರ ಯೆಹೋಶುವನನ್ನು ಇಸ್ರಯೇಲರೆಲ್ಲರ ದೃಷ್ಟಿಯಲ್ಲಿ ಇಷ್ಟು ಘನಪಡಿಸಿದ್ದರಿಂದ ಅವರು ಮೋಶೆಯಲ್ಲಿ ಹೇಗೋ ಹಾಗೆಯೇ ಇವನಲ್ಲಿಯೂ, ಇವನು ಜೀವದಿಂದಿದ್ದ ಕಾಲವೆಲ್ಲ ಗೌರವವುಳ್ಳವರು ಆಗಿದ್ದರು.
15 : ಸರ್ವೇಶ್ವರ ಯೆಹೋಶುವನಿಗೆ:
16 : “ಆಜ್ಞಾಶಾಸನಗಳ ಮಂಜೂಷವನ್ನು ಹೊತ್ತ ಯಾಜಕರಿಗೆ ಜೋರ್ಡನಿನಿಂದ ಮೇಲೆ ಬರಬೇಕೆಂದು ಆಜ್ಞಾಪಿಸು,” ಎಂದರು.
17 : ಆತ ಅವರಿಗೆ ಅಂತೆಯೇ ವಿಧಿಸಿದನು.
18 : ಸರ್ವೇಶ್ವರನ ಒಡಂಬಡಿಕೆಯ ಮಂಜೂಷವನ್ನು ಹೊತ್ತ ಯಾಜಕರು ಜೋರ್ಡನಿನಿಂದ ಮೇಲೆ ಬಂದು ಒಣನೆಲದಲ್ಲಿ ಕಾಲಿಟ್ಟ ಕೂಡಲೇ ನೀರು ಮುಂಚಿನಂತೆ ಬಂದು ಜೋರ್ಡನ್ ನದಿಯ ದಡವಿೂರಿ ಹರಿಯಿತು.
19 : ಜನರು ಮೊದಲನೇ ತಿಂಗಳಿನ ಹತ್ತನೆಯ ದಿನ ಜೋರ್ಡನನ್ನು ದಾಟಿ ಜೆರಿಕೋವಿನ ಪೂರ್ವ ಗಡಿಯಲ್ಲಿರುವ ಗಿಲ್ಗಾಲೆಂಬಲ್ಲಿಗೆ ಬಂದು ತಂಗಿದರು.
20 : ಯೆಹೋಶುವನು ಜೋರ್ಡನಿನಿಂದ ತೆಗೆದುಕೊಂಡು ಬಂದ ಹನ್ನೆರಡು ಕಲ್ಲುಗಳನ್ನು ಗಿಲ್ಗಾಲಿನಲ್ಲೇ ನಿಲ್ಲಿಸಿದನು.
21 : ಆತ ಇಸ್ರಯೇಲರಿಗೆ, “ಮುಂದಿನ ಕಾಲದಲ್ಲಿ ನಿಮ್ಮ ಮಕ್ಕಳು ಈ ಕಲ್ಲುಗಳನ್ನು ಏಕೆ ನೆಟ್ಟಿದ್ದಾರೆಂದು ಕೇಳಿದರೆ ನೀವು ಅವರಿಗೆ,
22 : ‘ಇಸ್ರಯೇಲರು ಒಣನೆಲವಾಗಿದ್ದ ಈ ಜೋರ್ಡನನ್ನು ದಾಟಿ ಬಂದುದಕ್ಕಾಗಿ’ ಎಂದು ಹೇಳಿ.
23 : ನಿಮ್ಮ ದೇವರಾದ ಸರ್ವೇಶ್ವರ ನಮ್ಮ ಕಣ್ಮುಂದೆ ಕೆಂಪುಸಮುದ್ರವನ್ನು ಬತ್ತಿಸಿ, ನಮ್ಮನ್ನು ದಾಟಿಸಿದಂತೆ ಈಗ ನಿಮ್ಮ ಕಣ್ಮುಂದೆಯೇ ಈ ಜೋರ್ಡನನ್ನು ಬತ್ತಿಸಿ, ನಿಮ್ಮನ್ನು ದಾಟಿಸಿದ್ದಾರೆ.
24 : ಇದರಿಂದ ಭೂನಿವಾಸಿಗಳೆಲ್ಲರು ಸರ್ವೇಶ್ವರನ ಹಸ್ತವು ಪರಾಕ್ರಮವುಳ್ಳದ್ದೆಂದು ತಿಳಿದುಕೊಳ್ಳುವರು. ನಿಮ್ಮ ದೇವರಾದ ಸರ್ವೇಶ್ವರನಲ್ಲಿ ಯಾವಾಗಲೂ ಭಯಭಕ್ತಿಯುಳ್ಳವರಾಗಿರುವರು.

Holydivine