Joshua - Chapter 23
Holy Bible

1 : ಸರ್ವೇಶ್ವರಸ್ವಾಮಿ ಸುತ್ತಮುತ್ತಲಿನ ಶತ್ರುಗಳನ್ನು ನಿರ್ಮೂಲಮಾಡಿ ಇಸ್ರಯೇಲರಿಗೆ ನೆಮ್ಮದಿಯಿತ್ತರು. ಬಹಳ ದಿನಗಳಾದ ತರುವಾಯ ಯೆಹೋಶುವ ಹಣ್ಣು ಹಣ್ಣು ಮುದುಕನಾದ.
2 : ಆತ ಇಸ್ರಯೇಲರೆಲ್ಲರನ್ನು, ಅವರ ಹಿರಿಯರನ್ನು, ಮುಖ್ಯಸ್ಥರನ್ನು, ನ್ಯಾಯಾಧಿಪತಿಗಳನ್ನು ಹಾಗೂ ಅಧಿಕಾರಿಗಳನ್ನು ತನ್ನ ಬಳಿಗೆ ಕರೆಯಿಸಿದನು. ಅವರಿಗೆ, “ನಾನು ಮುಪ್ಪಿನ ಮುದುಕನಾದೆ.
3 : ನಿಮ್ಮ ದೇವರಾದ ಸರ್ವೇಶ್ವರ ನಿಮ್ಮ ಪರವಾಗಿದ್ದು, ಈ ಜನಾಂಗಗಳಿಗೆ ಮಾಡಿದ್ದೆಲ್ಲವನ್ನು ನೀವು ಕಣ್ಣಾರೆ ನೋಡಿದ್ದೀರಿ. ಹೌದು, ನಿಮ್ಮ ಪರವಾಗಿ ಯುದ್ಧ ಮಾಡಿದಾತ ನಿಮ್ಮ ದೇವರಾದ ಸರ್ವೇಶ್ವರ ಸ್ವಾಮಿಯೇ.
4 : ನೋಡಿ, ಜೋರ್ಡನಿನಿಂದ ಪಶ್ಚಿಮ ಮಹಾ ಸಮುದ್ರದವರೆಗೂ ಇರುವ ಜನಾಂಗಗಳಲ್ಲಿ ಸತ್ತವರ ಹಾಗೂ ಉಳಿದವರ ನಾಡನ್ನು ನಿಮಗೆ ಸೊತ್ತಾಗಿಕೊಟ್ಟಿದ್ದೇನೆ,
5 : ನಿಮ್ಮ ದೇವರಾದ ಸರ್ವೇಶ್ವರ ತಾವೇ ಉಳಿದವರನ್ನು ನಿಮ್ಮ ಕಣ್ಮುಂದೆ ಹೊರಡಿಸಿಬಿಡುವರು. ಅವರ ವಾಗ್ದಾನದಂತೆ ಆ ಜನರ ನಾಡನ್ನು ನೀವು ವಶಪಡಿಸಿಕೊಳ್ಳುವಿರಿ.
6 : ಮೋಶೆಯ ಧರ್ಮಶಾಸ್ತ್ರವನ್ನೂ ಎಲ್ಲಾ ವಿಧಿಗಳನ್ನೂ ಕೈಗೊಳ್ಳುವುದರಲ್ಲಿ ಸ್ಥಿರ ಚಿತ್ತದಿಂದಿರಿ. ಎಡಕ್ಕಾಗಲಿ ಬಲಕ್ಕಾಗಲಿ ಓರೆಯಾಗಬೇಡಿ.
7 : ಉಳಿದಿರುವ ಈ ಜನಾಂಗಗಳ ಜೊತೆ ಸೇರಿಕೊಳ್ಳಬೇಡಿ. ಅವರ ದೇವತೆಗಳ ಹೆಸರು ಹೇಳಿ ಆರಾಧಿಸಬಾರದು, ಪ್ರಮಾಣ ಮಾಡಬಾರದು, ಅವುಗಳನ್ನು ಪೂಜಿಸಬಾರದು. ಅವುಗಳಿಗೆ ಸೇವೆ ಮಾಡಬಾರದು.
8 : ಈವರೆಗೆ ಹೇಗೋ ಹಾಗೆಯೇ ಇನ್ನು ಮುಂದಕ್ಕೂ ನಿಮ್ಮ ದೇವರಾದ ಸರ್ವೇಶ್ವರನನ್ನೇ ಅಂಟಿಕೊಂಡಿರಿ.
9 : ಸರ್ವೇಶ್ವರ ಮಹಾಪರಾಕ್ರಮಿಗಳಾದ ಜನಾಂಗಗಳನ್ನು ನಮ್ಮೆದುರಿನಿಂದ ಓಡಿಸಿಬಿಟ್ಟಿದ್ದಾರೆ. ನಮ್ಮನ್ನು ಪ್ರತಿಭಟಿಸಿ ನಿಂತವನು ಒಬ್ಬನೂ ಇಲ್ಲ.
10 : ನಿಮ್ಮ ದೇವರಾದ ಸರ್ವೇಶ್ವರ ತಮ್ಮ ವಾಗ್ದಾನದಂತೆ ನಿಮ್ಮ ಪರವಾಗಿ ಯುದ್ಧಮಾಡಿದರು. ಆದ್ದರಿಂದಲೇ ನಿಮ್ಮಲ್ಲಿ ಒಬ್ಬನು ಸಾವಿರ ಜನರನ್ನು ಓಡಿಸುವಷ್ಟು ಶಕ್ತನಾದ.
11 : ಇಂತಿರಲು ಜಾಗರೂಕತೆಯಿಂದಿರಿ, ನಿಮ್ಮ ಪ್ರಾಣದಂತೆ ದೇವರಾದ ಸರ್ವೇಶ್ವರನನ್ನೇ ಪ್ರೀತಿಸಿರಿ.
12 : ದೇವರಿಗೆ ವಿಮುಖರಾಗಿ, ನಿಮ್ಮ ಮಧ್ಯೆ ಉಳಿದಿರುವ ಈ ಜನಾಂಗಗಳೊಡನೆ ಕೊಟ್ಟು ತಂದು ಮಿಶ್ರವಾಗಬೇಡಿ.
13 : ಮಿಶ್ರವಾದರೆ ನಿಮ್ಮ ದೇವರಾದ ಸರ್ವೇಶ್ವರ ಅವರನ್ನು ನಿಮ್ಮ ಮಧ್ಯೆಯಿಂದ ಹೊರಡಿಸುವುದೇ ಇಲ್ಲವೆಂಬುದು ನಿಮಗೆ ತಿಳಿದಿರಲಿ. ಆ ಜನರೇ ನಿಮಗೆ ಉರುಳೂ ಬೋನೂ ಆಗುವರು; ಪಕ್ಕೆಗೆ ಬಡಿಯುವ ಕೊರಡಾಗಿಯೂ ಇರಿಯುವ ಶೂಲವಾಗಿಯೂ ಕಣ್ಣಿಗೆ ಚುಚ್ಚುವ ಮುಳ್ಳಾಗಿಯೂ ಮಾರ್ಪಡುವರು. ಕಡೆಗೆ ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ಕೊಟ್ಟ ಈ ಚೆಲುವ ನಾಡಲ್ಲಿ ನೀವೇ ಇಲ್ಲದಂತಾಗುವಿರಿ.
14 : ಈಗ ನಾನು, ಭೂನಿವಾಸಿಗಳೆಲ್ಲರು ಹಿಡಿಯುವ ಹಾದಿಯನ್ನು ಹಿಡಿಯಬೇಕಾಗಿದೆ. ನಿಮ್ಮ ದೇವರಾದ ಸರ್ವೇಶ್ವರ ನಿಮ್ಮ ವಿಷಯದಲ್ಲಿ ನುಡಿದ ಆಶೀರ್ವಚನಗಳಲ್ಲಿ ಒಂದೂ ವ್ಯರ್ಥವಾಗಲಿಲ್ಲ. ಎಲ್ಲವೂ ತಪ್ಪದೆ ನೆರವೇರಿವೆ ಎಂಬುದು ನಿಮಗೆ ಮನದಟ್ಟಾಗಿರಲಿ.
15 : ನಿಮ್ಮ ದೇವರಾದ ಸರ್ವೇಶ್ವರ ತಮ್ಮ ವಾಗ್ದಾನಕ್ಕನುಸಾರ ಈಗ ನಿಮಗೆ ಎಲ್ಲಾ ವಿಧದ ಒಳಿತನ್ನೂ ಅನುಗ್ರಹಿಸಿದಂತೆಯೇ ನಿಮ್ಮ ಮೇಲೆ ಎಲ್ಲಾ ತರದ ಕೇಡುಗಳನ್ನು ಬರಮಾಡಿ ತಾವು ಕೊಟ್ಟ ಈ ಚೆಲುವಾದ ನಾಡಿನಿಂದ ನಿಮ್ಮನ್ನು ನಿರ್ಮೂಲ ಮಾಡುವರು.
16 : ದೇವರಾದ ಸರ್ವೇಶ್ವರನ ನಿಬಂಧನೆಯನ್ನು ನೀವು ವಿೂರಿ ಅನ್ಯದೇವತೆಗಳಿಗೆ ಸೇವೆ ಸಲ್ಲಿಸಿ, ಅಡ್ಡಬಿದ್ದರೆ, ಸರ್ವೇಶ್ವರನ ಕೋಪಾಗ್ನಿ ನಿಮ್ಮ ಮೇಲೆ ಎರಗುವುದು; ಅವರು ನಿಮಗೆ ಕೊಟ್ಟ ಈ ಒಳ್ಳೆಯ ನಾಡಿನಿಂದ ಹೊರ ದೂಡಲ್ಪಟ್ಟು ಬೇಗನೆ ನಾಶವಾಗುವಿರಿ,” ಎಂದನು.

Holydivine