Esther - Chapter 6
Holy Bible

1 : ಆ ರಾತ್ರಿ ಅರಸನಿಗೆ ನಿದ್ದೆಯೇ ಬರಲಿಲ್ಲ. ಆದ್ದರಿಂದ, ಸ್ಮರಿಸತಕ್ಕ ಪೂರ್ವ ಘಟನೆಗಳನ್ನು ಬರೆದಿಟ್ಟಿದ್ದ ಗ್ರಂಥವನ್ನು ತರಿಸಿ, ಅದನ್ನು ಪಾರಾಯಣಮಾಡಿಸುತ್ತಿದ್ದಾಗ
2 : ಅರಸನನ್ನು ಕೊಲ್ಲಲು ದ್ವಾರಪಾಲಕರಾದ ಬಿಗೆತಾನ್, ತೆರೆಷ್ ಎಂಬಿಬ್ಬರು ರಾಜಕಂಚುಕಿಗಳು ಪಿತೂರಿ ನಡೆಸಿದ್ದ ಪ್ರಕರಣ ಹಾಗೂ ಅದು ಮೊರ್ದೆಕೈಯ ಮುಖಾಂತರ ತಿಳಿದು ಬಂದ ಲಿಖಿತ ವಿಷಯ ಅದರಲ್ಲಿ ಸಿಕ್ಕಿದವು.
3 : ಆಗ ಅರಸನು, “ಈ ಸತ್ಕಾರ್ಯಕ್ಕಾಗಿ ಮೊರ್ದೆಕೈಯನಿಗೆ ಯಾವ ಸನ್ಮಾನ ಮಾಡಲಾಯಿತೆಂದು ವಿಚಾರಿಸಿದಾಗ, ಅವನ ಆಸ್ಥಾನಸೇವಕರು ಯಾವುದೂ ಇಲ್ಲವೆಂದು ಉತ್ತರವಿತ್ತರು.
4 : ಕೂಡಲೆ ಅರಸನು, “ಯಾರಲ್ಲಿ, ಅಂಗಳದಲ್ಲಿ?” ಎಂದು ವಿಚಾರಿಸಿದನು. ಅಷ್ಟರಲ್ಲಿ, ತಾನೇ ಸಿದ್ಧಮಾಡಿಸಿದ್ದ ಗಲ್ಲುಮರಕ್ಕೆ ಮೊರ್ದೆಕೈಯನ್ನು ನೇಣುಹಾಕಿಸಲು ಅರಸನ ಅಪ್ಪಣೆಯನ್ನು ಪಡೆಯುವುದಕ್ಕೋಸ್ಕರ ಹಾಮಾನನು ಆಗತಾನೆ ಅರಮನೆಯ ಹೊರಗಣ ಅಂಗಳಕ್ಕೆ ಬಂದಿದ್ದನು.
5 : ಆದ್ದರಿಂದ ರಾಜಸೇವಕರು, “ಇಗೋ, ಹಾಮಾನರು ಅಂಗಳದಲ್ಲಿ ನಿಂತುಕೊಂಡಿದ್ದಾರೆ,” ಎಂದರು. ಅರಸನು, “ಅವನು ಒಳಗೆ ಬರಲಿ,” ಎಂದು ಅಪ್ಪಣೆಮಾಡಿದನು.
6 : ಹಾಮಾನನು ಒಳಗೆ ಬಂದಾಗ ಅರಸನು ಅವನಿಗೆ, “ಅರಸನು ಒಬ್ಬ ವ್ಯಕ್ತಿಯನ್ನು ಗೌರವಿಸಲು ಬಯಸಿದರೆ ಅಂಥ ವ್ಯಕ್ತಿಗೆ ನೀಡಬಹುದಾದ ತಕ್ಕ ಸನ್ಮಾನ ಯಾವುದು?” ಎಂದು ವಿಚಾರಿಸಲು,
7 : ಹಾಮಾನನು ತನ್ನನ್ನಲ್ಲದೆ ಬೇರೆ ಯಾರನ್ನು ಸನ್ಮಾನಿಸಲು ಅರಸನು ಬಯಸಿಯಾನು ಎಂದು ತನ್ನಲ್ಲೆ ಅಂದುಕೊಂಡು ಅವನಿಗೆ ಪ್ರತ್ಯುತ್ತರವಾಗಿ, “ಅರಸನು ಸನ್ಮಾನಿಸಬೇಕೆಂದಿರುವ ವ್ಯಕ್ತಿಗೆ ಈ ರೀತಿ ಮಾಡಬೇಕು:
8 : ಅರಸನು ಧರಿಸಿಕೊಳ್ಳುವ ರಾಜವಸ್ತ್ರಗಳನ್ನೂ ಸವಾರಿಮಾಡುವ ಪಟ್ಟದ ಕುದುರೆಯನ್ನೂ ತರಿಸಬೇಕು.
9 : ಆ ವಸ್ತ್ರಗಳನ್ನೂ ಕುದುರೆಯನ್ನೂ ಅರಸ ಪ್ರಧಾನ ಸರದಾರರಲ್ಲೊಬ್ಬನ ವಶಕ್ಕೆ ಕೊಡಬೇಕು; ಇವನು, ಅರಸನು ಸನ್ಮಾನಿಸಬೇಕೆಂದಿರುವ ವ್ಯಕ್ತಿಗೆ ರಾಜವಸ್ತ್ರಗಳನ್ನು ತೊಡಿಸಿ, ಕುದುರೆಯ ಮೇಲೆ ಕೂರಿಸಿ ಪಟ್ಟಣದ ರಾಜಬೀದಿಗಳಲ್ಲಿ ಮೆರವಣಿಗೆ ಮಾಡಿಸುತ್ತಾ, ಅವನ ಮುಂದೆ ‘ಅರಸನು ಸನ್ಮಾನಿಸಬೇಕೆಂದಿರುವ ವ್ಯಕ್ತಿಯನ್ನು ಗೌರವಿಸುವ ರೀತಿ ಇದೇ’ ಎಂದು ಪ್ರಕಟಪಡಿಸಬೇಕು,” ಎಂದನು.
10 : ಕೂಡಲೆ ಅರಸನು ಹಾಮಾನನಿಗೆ, “ನೀನು ಹೇಳಿದ ಪ್ರಕಾರವೇ ಬೇಗನೆ ಹೋಗಿ ರಾಜವಸ್ತ್ರಗಳನ್ನೂ ಪಟ್ಟದ ಕುದುರೆಯನ್ನೂ ತೆಗೆದುಕೊಂಡು ಅರಮನೆಯ ಬಾಗಿಲಲ್ಲಿ ಕುಳಿತಿರುವ ಮೊರ್ದೆಕೈ ಎಂಬ ಯೆಹೂದ್ಯನಿಗೆ ಹಾಗೆಯೇ ಮಾಡು. ನೀನು ಸಲಹೆ ಮಾಡಿದವುಗಳಲ್ಲಿ ಒಂದನ್ನೂ ಬಿಡದೆ, ಚಾಚೂತಪ್ಪದೆ ನೆರವೇರಿಸು,” ಎಂದು ಅಪ್ಪಣೆಮಾಡಿದನು.
11 : ಬೇರೆ ವಿಧಿಯಿಲ್ಲದೆ ಹಾಮಾನನು ಹೊರಟು ಆ ವಸ್ತ್ರಗಳನ್ನು, ಕುದುರೆಯನ್ನು ತೆಗೆದುಕೊಂಡು ಮೊರ್ದೆಕೈಗೆ ಆ ವಸ್ತ್ರಗಳನ್ನು ತೊಡಿಸಿ, ಅವನನ್ನು ಕುದುರೆಯ ಮೇಲೆ ಕೂರಿಸಿ ಪಟ್ಟಣದ ರಾಜಬೀದಿಗಳಲ್ಲಿ ಮೆರವಣಿಗೆ ಮಾಡಿಸಿ ಅವನ ಮುಂದೆ, “ಅರಸನು ಸನ್ಮಾನಿಸಬೇಕೆಂದಿರುವ ವ್ಯಕ್ತಿಯನ್ನು ಗೌರವಿಸುವ ರೀತಿ ಇದೇ,” ಎಂದು ಪ್ರಕಟಪಡಿಸಿದನು.
12 : ಮೊರ್ದೆಕೈ, ಪುನಃ ಅರಮನೆಯ ಬಾಗಿಲಿಗೆ ಬಂದನು. ಹಾಮಾನನಾದರೋ ವ್ಯಸನಕ್ರಾಂತನಾಗಿ ಮುಖ ಮುಚ್ಚಿಕೊಂಡು ಶೀಘ್ರವಾಗಿ ಮನೆಗೆ ಧಾವಿಸಿದನು.
13 : ತನ್ನ ಪತ್ನಿ ಜೆರೆಷಳಿಗೂ ಎಲ್ಲಾ ಆಪ್ತರಿಗೂ ತನಗೆ ಸಂಭವಿಸಿದುದನ್ನೆಲ್ಲಾ ವರದಿ ಮಾಡಿದನು. ಆಗ ಅವನ ಪಚಿಡಿತರೂ ಪತ್ನಿಯೂ ಅವನಿಗೆ, “ಯಾವನಿಂದ ನಿಮ್ಮ ಪತನವು ಪ್ರಾರಂಭವಾಯಿತೋ ಆ ವ್ಯಕ್ತಿ ಒಂದು ವೇಳೆ ಯೆಹೂದ್ಯನಾಗಿದ್ದರೆ, ನೀವು ಅವನನ್ನೆಂದಿಗೂ ಜಯಿಸಲಾರಿರಿ. ಅವನ ಮುಂದೆ ಬಿದ್ದು ಹಾಳಾಗುವಿರಿ,” ಎಂದು ಎಚ್ಚರವಿತ್ತರು.
14 : ಅವರು ಇನ್ನೂ ಮಾತಾಡುತ್ತಿರುವಾಗಲೇ ರಾಜಕಂಚುಕಿಗಳು ಬಂದು, ಎಸ್ತೇರಳು ಏರ್ಪಡಿಸಿರುವ ಔತಣಕ್ಕೆ ಬೇಗನೆ ಹೊರಟು ಬರಬೇಕೆಂದು ಹಾಮಾನನನ್ನು ಕರೆದರು

Holydivine