Esther - Chapter 2
Holy Bible

1 : ಇದಾದ ಕೆಲವು ದಿನಗಳ ನಂತರ ಅರಸನ ಕೋಪವು ಶಾಂತವಾದಾಗ, ಅವನು ವಷ್ಟಿರಾಣಿಯನ್ನು, ಆಕೆಯ ವರ್ತನೆಯನ್ನು, ಆಕೆಯ ವಿರುದ್ಧ ತಾನು ನೀಡಿದ್ದ ತೀರ್ಪನ್ನು ಜ್ಞಾಪಿಸಿಕೊಂಡನು.
2 : ಅವನ ಸೇವೆಮಾಡುತ್ತಿದ್ದ ರಾಜಪರಿವಾರದವರು ಅವನಿಗೆ, “ಅರಸರಿಗೋಸ್ಕರ ಸುಂದರ ಕನ್ಯೆಯರನ್ನು ಹುಡುಕುವುದಕ್ಕೆ ಅಪ್ಪಣೆ ಆಗಬೇಕು.
3 : ಇದಕ್ಕಾಗಿ ರಾಜ್ಯದ ಎಲ್ಲಾ ಸಂಸ್ಥನಗಳಿಗೂ ಅಧಿಕಾರಿಗಳನ್ನು ಕಳುಹಿಸಬೇಕು. ಇವರು ಸುರಸುಂದರಿಯರಾದ ಕನ್ಯೆಯರನ್ನೆಲ್ಲಾ ಶೂಷನ್ ನಗರಕ್ಕೆ ಕರೆತಂದು ಅಂತಃಪುರದಲ್ಲಿ ಸೇರಿಸ ಅಂತಃಪುರದ ಪಾಲಕನೂ ರಾಜ ಕಂಚುಕಿಯೂ ಆದ ಹೇಗೈಯ ವಶಕ್ಕೆ ಒಪ್ಪಿಸಬೇಕು. ಇವನು ಅವರಿಗೆ ಸೌಂದರ್ಯವರ್ಧಕ ಸಾಧನಗಳನ್ನು, ಲೇಪನದ್ರವ್ಯಗಳನ್ನು ಕೊಡುವಂತೆ ವ್ಯವಸ್ಥೆಮಾಡಬೇಕು.
4 : ಯಾವ ಕನ್ಯೆಯು ಅರಸನಿಗೆ ಸುಪ್ರೀತಳಾಗಿ ಕಾಣುವಳೋ ಅವಳು ವಷ್ಟಿರಾಣಿಯ ಬದಲಾಗಿ ಪಟ್ಟದರಸಿಯಾಗಬೇಕು,” ಎಂದು ಹೇಳಿದರು. ಅವರ ಈ ಸಲಹೆ ಅರಸನಿಗೆ ಸೂಕ್ತವೆಂದು ತೋರಿ ಬರಲು ಅವನು ಅದೇ ಪ್ರಕಾರ ಮಾಡಿದನು.
5 : ಶೂಷನ್ ನಗರದಲ್ಲಿ ಮೊರ್ದೆಕೈ ಎಂಬ ಯೆಹೂದ್ಯನೊಬ್ಬನು ವಾಸಿಸುತ್ತಿದ್ದನು. ಇವನು ಬೆನ್ಯಾಮೀನ್ ಕುಲದ ಕೀಷನ ಮರಿಮಗನೂ, ಶಿಮ್ಗಿಯ ಮೊಮ್ಮಗನೂ ಯಾಯೀರನ ಮಗನೂ ಆಗಿದ್ದನು.
6 : ಬಾಬಿಲೋನಿಯದ ಅರಸ ನೆಬೂಕದ್ನೆಚ್ಚರನಿಂದ ಸೆರೆಹಿಡಿಯಲಾದ ಯೆಹೂದ ಅರಸನಾದ ಯೆಕೋನ್ಯನ ಸಂಗಡ ಜೆರುಸಲೇಮಿನಿಂದ ಸೆರೆಹಿಡಿಯಲಾದವರಲ್ಲಿ ಇವನೂ ಒಬ್ಬನಾಗಿದ್ದನು.
7 : ತಂದೆತಾಯಿಗಳನ್ನು ಕಳೆದುಕೊಂಡು ಅನಾಥಳಾಗಿದ್ದ ತನ್ನ ಚಿಕ್ಕಪ್ಪನ ಮಗಳಾದ ಎಸ್ತೇರಳನ್ನು (ಹದೆಸ್ಸಾ ಆಕೆಯ ಇನ್ನೊಂದು ಹೆಸರು) ತನ್ನ ಸ್ವಂತ ಮಗಳಂತೆ ಸ್ವೀಕರಿಸಿ ಸಾಕುತ್ತಿದ್ದನು. ಈಕೆ ಬಲು ರೂಪಸಿ ಹಾಗು ಲಾವಣ್ಯವತಿಯಾಗಿದ್ದಳು.
8 : ಅರಸನ ನಿರ್ಣಯದ ಪ್ರಕಾರ ರಾಜಾಜ್ಞೆಯು ಎಲ್ಲೆಡೆ ಪ್ರಕಟವಾಯಿತು. ಅನೇಕ ಮಂದಿ ಕನ್ಯೆಯರನ್ನು ಶೂಷನ್ ನಗರಕ್ಕೆ ಕರೆತಂದು ಅಂತಃಪುರಪಾಲಕನಾದ ಹೇಗೈಯನ ವಶಕ್ಕೆ ಒಪ್ಪಿಸಲಾಯಿತು. ಇಂಥವರಲ್ಲಿ ಎಸ್ತೇರಳೂ ಒಬ್ಬಳು.
9 : ಎಸ್ತೇರಳು ಹೇಗೈಯನ ಮೆಚ್ಚುಗೆಯನ್ನು ಗಳಿಸಿ ಅವನ ದಯೆಗೆ ಪಾತ್ರಳಾದಳು. ಈ ಕಾರಣದಿಂದ ಅವನು ಆಕೆಗೆ ತಕ್ಕ ಸೌಂದರ್ಯವರ್ಧಕ ಲೇಪನದ್ರವ್ಯಗಳನ್ನು ಹಾಗೂ ಉತ್ತಮ ಭೋಜನಾಂಶವನ್ನು ಕೊಟ್ಟು, ಆಕೆಯನ್ನೂ ಆಕೆಯ ಸೇವೆಗೆ ಆರಿಸಿದ ಏಳುಮಂದಿ ದಾಸಿಯರನ್ನೂ ಅಂತಃಪುರದ ಉತ್ತಮ ಭಾಗದಲ್ಲಿರಿಸಿದನು.
10 : ತನ್ನ ಸ್ವಜನರ ಹಾಗೂ ಬಂಧು ಬಳಗದವರ ಬಗ್ಗೆ ಎಸ್ತೇರಳು ಯಾರಿಗೂ ತಿಳಿಸಿರಲಿಲ್ಲ. ತಿಳಿಸಬಾರದೆಂದು ಮೊರ್ದೆಕೈ ವಿಧಿಸಿದ್ದನು.
11 : ಎಸ್ತೇರಳ ಯೋಗಕ್ಷೇಮವನ್ನು ವಿಚಾರಿಸಿಕೊಳ್ಳಲು ಮೊರ್ದೆಕೈ ಪ್ರತಿದಿನ ಅಂತಃಪುರದ ಅಂಗಳದ ಬಳಿ ಬಂದು ಹೋಗುತ್ತಿದ್ದನು.
12 : ಕನ್ಯೆಯರ ಲೇಪನಕಾಲವು ಪೂರೈಸುವುದಕ್ಕೆ ಸುಗಂಧ ತೈಲದ ಪ್ರಯೋಗದಲ್ಲಿ ಆರು ತಿಂಗಳು, ಕಾಂತಿವರ್ಧಕ ಪರಿಮಳ ದ್ರವ್ಯಗಳ ಪ್ರಯೋಗದಲ್ಲಿ ಆರು ತಿಂಗಳು ಹೀಗೆ ಒಂದು ವರ್ಷ ಕಳೆಯಿತು. ಇದಾದನಂತರ ಪದ್ಧತಿಯ ಪ್ರಕಾರ ಸಿಂಗರಿಸಿಕೊಂದ ಪ್ರತಿಯೊಬ್ಬ ಕನ್ಯೆಯು ತನ್ನ ಸರದಿಯಂತೆ ಅರಸನ ಬಳಿಗೆ ಹೋಗಬೇಕಿತ್ತು.
13 : ಹೀಗೆ ತನ್ನ ಸರದಿ ಬಂದಾಗ ತನ್ನೊಡನೆ ತೆಗೆದುಕೊಂಡು ಹೋಗಲು ಇಷ್ಟಪಡುವುದನ್ನೆಲ್ಲಾ ಆಕೆಗೆ ಒದಗಿಸಲಾಗುತ್ತಿತ್ತು.
14 : ಆಕೆ ರಾಜನಿವಾಸಕ್ಕೆ ಸಾಯಂಕಾಲ ಹೋದವಳು ಮಾರನೆಯ ದಿನ ಬೆಳಗ್ಗೆ ಅರಸನ ಉಪಪತ್ನಿಗಳ ಪಾಲಕನಾದ ಶವಷ್ಗಜನೆಂಬ ರಾಜಕಂಚುಕಿಯ ವಶದಲ್ಲಿದ್ದ ಎರಡನೆಯ ಅಂತಃಪುರಕ್ಕೆ ಬರಬೇಕಾಗಿತ್ತು. ಅರಸನು ಅವಳನ್ನು ಬಯಸಿ ಅವಳ ಹೆಸರು ಹಿಡಿದು ಕರೆಕಳುಹಿಸಿದ ಹೊರತು ಅವಳು ಪುನಃ ಅರಸನ ಬಳಿಗೆ ಹೋಗುವಂತಿರಲಿಲ್ಲ.
15 : ಹೀಗೆ ಅರಸನ ಬಳಿಗೆ ಹೋಗಲು ಮೊರ್ದೆಕೈಯ ದತ್ತುಮಗಳೂ ಅವನ ಚಿಕ್ಕಪ್ಪನಾದ ಅಬಿಹೈಲನ ಮಗಳೂ ಆದ ಎಸ್ತೇರಳ ಸರದಿ ಬಂದಾಗ, ಅಂತಃಪುರಪಾಲಕ ಹೇಗೈ ಎಂಬ ರಾಜಕಂಚುಕಿ ನೇಮಿಸಿದ್ದನ್ನೇ ಹೊರತು ಬೇರಾವುದನ್ನೂ ಆಕೆ ಕೇಳಲಿಲ್ಲ. ನೋಡಿದವರೆಲ್ಲರೂ ಆಕೆಯನ್ನು ಬಹುವಾಗಿ ಮೆಚ್ಚುತ್ತಿದ್ದರು.
16 : ಅರಸ ಅಹಷ್ಟೇರೋಷನ ಆಳ್ವಿಕೆಯ ಏಳನೇ ವರ್ಷದ ಹತ್ತನೆ ತಿಂಗಳಾದ ಪುಷ್ಯ ಮಾಸದಲ್ಲಿ (ತೇಬೆತ್ ಮಾಸದಲ್ಲಿ) ಆಕೆಯನ್ನು ಅರಸನ ಬಳಿಗೆ ಕರೆತರಲಾಯಿತು.
17 : ಅರಸನು, ಎಲ್ಲಾ ಸ್ತ್ರೀಯರಿಗಿಂತಲೂ ಹೆಚ್ಚಾಗಿ ಎಸ್ತೇರಳನ್ನು ಮೆಚ್ಚಿಕೊಂಡನು. ಎಲ್ಲಾ ಕನ್ಯೆಯರ ಪೈಕಿ ಆಕೆ ಅರಸನ ವಿಶೇಷ ದಯೆಗೂ ಪ್ರೀತಿಗೂ ಪಾತ್ರಳಾದಳು. ಈ ಕಾರಣ, ಅರಸನು ಆಕೆಯ ತಲೆಯ ಮೇಲೆ ರಾಜ ಮುಕುಟವನ್ನಿಟ್ಟು ವಷ್ಟಿರಾಣಿಗೆ ಬದಲಾಗಿ ಆಕೆಯನ್ನು ತನ್ನ ಪಟ್ಟದರಸಿಯನ್ನಾಗಿ ಆರಿಸಿಕೊಂಡನು.
18 : ತನ್ನ ಎಲ್ಲಾ ಪದಾಧಿಕಾರಿಗಳಿಗೂ ಪರಿವಾರದವರಿಗೂ ಎಸ್ತೇರಳ ಗೌರವಾರ್ಥವಾಗಿ ಒಂದು ಭಾರಿ ಔತಣವನ್ನೇರ್ಪಡಿಸಿದನು. ತನ್ನ ಎಲ್ಲಾ ಸಂಸ್ಥಾನಗಳಲ್ಲಿ, ಸೆರೆಯಲ್ಲಿದ್ದ ಬಂಧಿತರಿಗೆ ಬಿಡುಗಡೆಯನ್ನು ಘೋಷಿಸಿದನು. ರಾಜಮರ್ಯಾದೆಗೆ ತಕ್ಕತೆ ಪ್ರಜೆಗಳಿಗೆ ಉದಾರವಾಗಿ ದಾನಧರ್ಮಗಳನ್ನು ಮಾಡಿದನು.
19 : ಕನ್ಯೆಯರನ್ನು ಎರಡನೆಯ ಸಾರಿ ಕೂಡುಸುವಾಗ, ಮೊರ್ದೆಕೈ ಅರಮನೆಯ ಹೆಬ್ಬಾಗಿಲಿನಲ್ಲಿ ಕುಳಿತುಕೊಂಡಿದ್ದನು.
20 : ಮೊರ್ದೆಕೈಯ ಆದೇಶದಂತೆ ಎಸ್ತೇರಳು, ತನ್ನ ಬಂಧುಬಳಗ ದವರ ಬಗ್ಗೆಯಾಗಲಿ, ಸ್ವಜನರ ಬಗ್ಗೆಯಾಗಲಿ ಯಾರಿಗೂ ತಿಳಿಸಿರಲಿಲ್ಲ. (ಮೊರ್ದೆಕೈಯ) ಆರೈಕೆಯಲ್ಲಿದ್ದಾಗ ಆಕೆ ಯಾವ ರೀತಿ ನಡೆದುಕೊಂಡಿದ್ದಳೋ ಹಾಗೆಯೇ ಪ್ರಸ್ತುತ ಕಾಲದಲ್ಲೂ ಆತನ ಆಜ್ಞೆಯನ್ನು ಪಾಲಿಸುತ್ತಿದ್ದಳು.
21 : ಆ ದಿನಗಳಲ್ಲಿ ಮೊರ್ದೆಕೈ, ಎಂದಿನಂತೆ ಅರಮನೆಯ ಹೆಬ್ಬಾಗಿಲಿನಲ್ಲಿ ಕುಳಿತುಕೊಂಡಿದ್ದಾಗ ದ್ವಾರಪಾಲಕರಾದ ಬಿಗೆತಾನ್ ಮತ್ತು ತೆರೆಷ್ ಎಂಬಿಬ್ಬರು ರಾಜ ಕಂಚುಕಿಗಳು ಅರಸನ ವಿರುದ್ಧ ಕೈಯೆತ್ತವೇಕು ಎಂದು ಒಳಸಂಚು ಮಾಡಿದರು.
22 : ಈ ವಿಷಯ ಮೊರ್ದೆಕೈಗೆ ತಿಳಿದುಬಂದಾಗ, ಆತನು ಎಸ್ತೇರಳಿಗೆ ತಿಳಿಸಿದನು. ರಾಣಿಯು ಅವನ ಹೆಸರನ್ನು ಅರಸನಿಗೆ ಹೇಳಿ ಅವರು ನಡೆಸುತ್ತಿದ್ದ ಆ ಪಿತೂರಿ ಬಗ್ಗೆ ತಿಳಿಸಿದಳು.
23 : ಈ ವಿಷಯ ವಿಚಾರಣೆಗೆ ಬಂದು ಅದು ಸತ್ಯಸಂಗತಿಯೆಂದು ರುಜುವಾತು ಆಗಲು, ಆ ಇಬ್ಬರು ಪಿತೂರಿಗಾರರನ್ನು ಗಲ್ಲಿಗೇರಿಸಲಾಯಿತು. ಈ ಸಂಗತಿಯನ್ನು ರಾಜನ ದಿನಚರಿಯ ಪುಸ್ತಕದಲ್ಲಿ ಬರೆದಿಡಲಾಯಿತು.

Holydivine