Esther - Chapter 5
Holy Bible

1 : ಮೂರನೆಯ ದಿನ ಎಸ್ತೇರಳು ರಾಜವಸ್ತ್ರಾಭರಣಗಳನ್ನು ಧರಿಸಿ ಅರಮನೆಯ ಒಳಗಣ ಪ್ರಾಕಾರವನ್ನು ಪ್ರವೇಶಿಸಿ ರಾಜಮಂದಿರದ ಎದುರಿನಲ್ಲಿ ನಿಂತಳು. ಅರಸನು ಆ ಮಂದಿರದೊಳಗೆ ರಾಜಸಿಂಹಾಸನದ ಮೇಲೆ ಬಾಗಿಲಿಗೆ ಎದುರಾಗಿ ಕುಳಿತಿದ್ದನು.
2 : ಪ್ರಾಕಾರದಲ್ಲಿ ನಿಂತಿದ್ದ ಎಸ್ತೇರ್ ರಾಣಿಯನ್ನು ಅವನು ಕಂಡಕೂಡಲೆ, ಆಕೆಯೆಡೆ ಮೆಚ್ಚುಗೆ ತೋರಿ ತನ್ನ ಕೈಯಲ್ಲಿದ್ದ ಸ್ವರ್ಣ ರಾಜ ದಂಡವನ್ನು ಆಕೆಯ ಕಡೆಗೆ ಚಾಚಿದನು. ಎಸ್ತೇರಳು ಸಮೀಪಕ್ಕೆ ಬಂದು ರಾಜದಂಡದ ತುದಿಯನ್ನು ಮುಟ್ಟಿದಳು.
3 : ಅರಸನು ಆಕೆಗೆ, “ಎಸ್ತೇರ್ ರಾಣಿಯೇ, ನಿನ್ನ ಅಪೇಕ್ಷೆ ಏನು? ನಿನ್ನ ವಿಜ್ಞಾಪನೆ ಏನು? ನೀನು ನನ್ನ ರಾಜ್ಯದ ಅರ್ಧಭಾಗವನ್ನು ಕೇಳಿದರೂ ಸರಿ, ನಾನದನ್ನು ನಿನಗೆ ಕೊಡುವೆನು,” ಎಂದನು.
4 : ಪ್ರತ್ಯುತ್ತರವಾಗಿ ಎಸ್ತೇರಳು, “ಅರಸರ ಚಿತ್ತವಾದರೆ ನಾನು ತಮಗೋಸ್ಕರ ಸಿದ್ಧಮಾಡಿಸಿರುವ ಔತಣಕ್ಕೆ ತಾವು ಹಾಮಾನನೊಂದಿಗೆ ದಯಮಾಡಿಸಬೇಕು,” ಎಂದು ವಿನಂತಿಸಿದಳು
5 : ಕೂಡಲೆ ಅರಸನು, “ಎಸ್ತೇರಳ ವಿಜ್ಞಾಪನೆಯನ್ನು ಈಡೇರಿಸಲು ಹಾಮಾನನನ್ನು ತ್ವರೆಪಡಿಸಿರಿ,” ಎಂದು ಆಜ್ಞಾಪಿಸಿದನು; ಎಸ್ತೇರಳು ಏರ್ಪಡಿಸಿದ್ದ ಔತಣಕ್ಕೆ ಹಾಮಾನನೊಂದಿಗೆ ಹೋದನು.
6 : ದ್ರಾಕ್ಷಾರಸ ಪಾನಮಾಡುತ್ತಿರುವಾಗ ಅರಸನು ಮತ್ತೊಮ್ಮೆ ಎಸ್ತೇರಳಿಗೆ, “ನಿನ್ನ ವಿಜ್ಞಾಪನೆ ಯಾವುದು ಹೇಳು. ನಾನದನ್ನು ನೆರವೇರಿಸುವೆನು. ನೀನು ನನ್ನ ರಾಜ್ಯದ ಅರ್ಧಭಾಗವನ್ನು ಕೇಳಿದರು ಸರಿ, ನಾನದನ್ನು ನಿನಗೆ ಕೊಡುವೆನು,” ಎನ್ನಲು
7 : ಎಸ್ತೇರಳು, “ತಾವು ನನ್ನ ಮೇಲೆ ಕೃಪಾಕಟಾಕ್ಷವಿಟ್ಟು ನಾನು ಕೇಳುವುದನ್ನು ಅನುಗ್ರಹಿಸುವುದಕ್ಕೂ ನನ್ನ ವಿಜ್ಞಾಪನೆಯನ್ನು ನೆರವೇರಿಸುವುದಕ್ಕೂ ಚಿತ್ತವಾದರೆ,
8 : ನಾನು ತಮಗೋಸ್ಕರ ಮಾಡಿಸಲಿರುವ ಔತಣಕ್ಕೆ ನಾಳೆಯೂ ಹಾಮಾನನೊಂದಿಗೆ ದಯಮಾಡಿಸಬೇಕು. ಆಗ ತಾವು ಹೇಳಿದಂತೆ ನಾನು ಮಾಡುವೆನು. ಇದೇ ನನ್ನ ದೈನ್ಯ ಮನವಿ,” ಎಂದು ಉತ್ತರವಿತ್ತಳು.
9 : ಅಂದು ಹಾಮಾನನು ಹರ್ಷಭರಿತನಾಗಿ ಮನೆಗೆ ಹಿಂದಿರುಗುತ್ತಿರುವಾಗ ಮೊರ್ದೆಕೈ ತನಗೆ ಭಯಪಡದೆ, ತನ್ನ ಮುಂದೆ ಏಳದೆಯೂ ಅರಮನೆಯ ಹೆಬ್ಬಾಗಿಲಿನಲ್ಲಿ ಕುಳಿತುಕೊಂಡೇ ಇರುವುದನ್ನು ಕಂಡು ಅವನ ಮೇಲೆ ಕಡು ಕೋಪಗೊಂಡನು.
10 : ಆದರೂ ಸಹನೆ ಕಳೆದುಕೊಳ್ಳದೆ ಮನೆಗೆ ಹೋಗಿ ತನ್ನ ಆಪ್ತರನ್ನೂ ತನ್ನ ಪತ್ನಿ ಜೆರೆಷಳನ್ನೂ ಕರೆಯಿಸಿದನು.
11 : ಅವರ ಮುಂದೆ ತನ್ನ ಸಿರಿಸಂಪತ್ತನ್ನೂ ಪುತ್ರಲಾಭಾತಿಶಯವೆನ್ನೂ ಅರಸನು ತನ್ನನ್ನು ಸನ್ಮಾನಿಸಿ ಎಲ್ಲಾ ಪದಾಧಿಕಾರಿಗಳಲ್ಲಿಯೂ ರಾಜಸೇವಕರಲ್ಲಿಯೂ ತನಗೆ ಶ್ರೇಷ್ಠಸ್ಥಾನವನ್ನು ಕೊಟ್ಟದ್ದನ್ನೂ ವರ್ಣಿಸಿದನು.
12 : ಇದಲ್ಲದೆ, ಎಸ್ತೇರ್ ರಾಣಿಯೇ ಸ್ವತಃ ಏರ್ಪಡಿಸಿದ ಔತಣಕ್ಕೆ ಅರಸನ ಜೊತೆಯಲ್ಲಿ ತನ್ನನ್ನಲ್ಲದೆ ಬೇರಾರನ್ನು ಕರೆದಿಲ್ಲವೆಂತಲೂ ಮರುದಿನವೂ ಅರಸನೊಟ್ಟಿಗೆ ಔತಣ ಮಾಡಲು ತನ್ನನ್ನು ಆಹ್ವಾನಿಸಿ ರುವಳೆಂದೂ ತಿಳಿಸಿದನು.
13 : ಆದರೂ ಯೆಹೂದ್ಯನಾದ ಮೊರ್ದೆಕೈ ಅರಮನೆಯ ಬಾಗಿಲಲ್ಲಿ ತನ್ನ P್ಪಣ್ಣೆದುರು ಕುಳಿತಿರುವವರೆಗೂ ತನಗೆ ಯಾವ ಪ್ರಯೋಜನವೂ ಇಲ್ಲವೆಂದು ಹೇಳಿದನು.
14 : ಅದಕ್ಕೆ ಅವನ ಪತ್ನಿ ಜೆರೆಷಳೂ ಹಾಗೂ ಅವನ ಆಪ್ತರೂ ಅವನಿಗೆ, “ಅರಸನ ಅಪ್ಪಣೆಯನ್ನು ಪಡೆದು ಮೊರ್ದೆಕೈಯನ್ನು ಗಲ್ಲಿಗೇರಿಸುವ ಸಲುವಾಗಿ ಇಪ್ಪತ್ತೆರಡು ಮೀಟರ್ ಉದ್ದದ ಗಲ್ಲುಮರವೊಂದನ್ನು ಸಿದ್ಧಮಾಡಿಸಿರಿ. ಅನಂತರ ನೀವು ನೆಮ್ಮದಿಯಿಂದ ಅರಸನ ಜೊತೆ ಔತಣಕ್ಕೆ ಹೋಗಬಹುದು,” ಎಂದು ಸಲಹೆ ನೀಡಿದರು. ಅದು ಅವನಿಗೆ ಸಮರ್ಪಕವಾಗಿ ಕಂಡು ಬರಲು ಹಾಮಾನನು ಅದರಂತೆಯೇ ಗಲ್ಲುಮರವನ್ನು ಸಿದ್ಧಮಾಡಿಸಿದನು.

Holydivine