Nehemiah - Chapter 6
Holy Bible

1 : ನಾನು ಗೋಡೆಯನ್ನು ಕಟ್ಟಿಮುಗಿಸಿ ಬಾಗಿಲುಗಳಿಗೆ ಕದಗಳನ್ನು ಇನ್ನೂ ಹಚ್ಚಿಸಿರಲಿಲ್ಲ. ಗೋಡೆಯ ಸಂದುಗೊಂದುಗಳನ್ನು ಕೂಡಿಸಿದ ಸಂಗತಿ ಸನ್ಬಲ್ಲಟ್, ಟೋಬಿಯ ಹಾಗು ಅರೇಬಿಯನಾದ ಗೆಷಮ್ ಇವರಿಗೂ
2 : ನಮ್ಮ ಬೇರೆ ವಿರೋಧಿಗಳಿಗೂ ಗೊತ್ತಾಯಿತು. ಅವರಲ್ಲಿ ಸನ್ಬಲ್ಲಟ್ ಮತ್ತು ಗೆಷನರು ನನಗೆ, “ಓನೋ ಕಣಿವೆಯ ಹಕ್ಕೆ ಫಿರೀಮಿನಲ್ಲಿ ಒಬ್ಬರನೊಬ್ಬರು ಎದುರುಗೊಳ್ಳೋಣ ಬಾ,” ಎಂದು ಹೇಳಿ ಕಳುಹಿಸಿದರು. ಅವರು ನನಗೆ ಕೇಡುಬಗೆಯುವವರು ಎಂದು ತಿಳಿಯಿತು.
3 : ನಾನು ದೂತರ ಮುಖಾಂತರ ಅವರಿಗೆ, “ನನಗೆ ಮುಖ್ಯವಾದ ಕಾರ್ಯವಿದೆ; ಅದನ್ನು ಬಿಟ್ಟು ಬಂದರೆ ಕೆಲಸ ನಿಂತುಹೋಗುತ್ತದೆ; ನಾನು ಬರಲಾಗದು.” ಎಂದು ಹೇಳಿಸಿದೆ.
4 : ಅವರು ನಾಲ್ಕುಸಾರಿ ಅದೇ ರೀತಿ ಹೇಳಿ ಕಳುಹಿಸಿದರೂ ನಾನು ಅದೇ ಉತ್ತರಕೊಟ್ಟೆ.
5 : ಐದನೆಯ ಸಾರಿ ಸನ್ಬಲ್ಲಟನು ಅದೇ ಉದ್ದೇಶದಿಂದ ತನ್ನ ಸ್ವಂತ ಸೇವಕನ ಮುಖಾಂತರ ಮುಚ್ಚದಿದ್ದ ಒಂದು ಪತ್ರವನ್ನು ಕಳುಹಿಸಿದನು.
6 : ಅದರಲ್ಲಿ, “ಗೆಷೆಮ್ ಎಂಬವನು ನನಗೆ ತಿಳಿಸಿದ ಪ್ರಕಾರ ನೀನೂ ಯೆಹೂದ್ಯರೂ ನನ್ನ ಮೇಲೆ ದಾಳಿಮಾಡಬೇಕೆಂದಿದ್ದೀರಿ; ಆದುದರಿಂದಲೇ, ನೀನು ಆ ಗೋಡೆಯನ್ನು ಕಟ್ಟಿಸುತ್ತಿರುವೆ. ನೀನು ಅವರ ಅರಸನಾಗುವೆ ಎಂಬ ಸುದ್ದಿ ಜನರಲ್ಲಿ ಹಬ್ಬಿದೆ.
7 : ಇದಲ್ಲದೆ ಜುದೇಯದಲ್ಲಿ ಒಬ್ಬ ಅರಸನಿದ್ದಾನೆಂದು ನಿನ್ನನ್ನು ಕುರಿತು ಜೆರುಸಲೇಮಿನಲ್ಲಿ ಪ್ರಕಟಿಸುವುದಕ್ಕಾಗಿ ಪ್ರವಾದಿಗಳನ್ನು ನೇಮಿಸಿರುವೆ ಎಂಬುದಾಗಿ ಹೇಳುತ್ತಾರೆ. ಈ ಸುದ್ದಿ ರಾಜನಿಗೂ ಮುಟ್ಟಲಿದೆ; ಆದುದರಿಂದ ಕೂಡಿ ಮಾತಾಡೋಣಬಾ,” ಎಂದು ಬರೆದಿತ್ತು.
8 : ಅದಕ್ಕೆ ನಾನು, “ನೀನು ಬರೆದಂಥದ್ದು ಏನೂ ನಡೆದಿಲ್ಲ; ಅದನ್ನು ನೀನೆ ನಿನ್ನ ಮನಸ್ಸಿನಲ್ಲಿ ಕಲ್ಪಿಸಿಕೊಂಡಿರುವೆ,” ಎಂದು ಹೇಳಿಕಳುಹಿಸಿದೆ.
9 : ಹೀಗೆ ಎಲ್ಲರೂ, ನಮ್ಮ ಕೈಗಳು ಜೋಲುಬಿದ್ದು ಕೆಲಸ ಮುಗಿಯದೆ ನಿಂತುಹೋಗಲಿ ಎಂದುಕೊಂಡು ನಮ್ಮನ್ನು ಹೆಸರಿಸುವುದಕ್ಕೆ ಪ್ರಯತ್ನಿಸಿದರು. ನಾನೋ, “ನನ್ನ ದೇವರೇ, ನನ್ನ ಕೈಗಳನ್ನು ಬಲಪಡಿಸಿ,” ಎಂದು ಪ್ರಾರ್ಥಿಸಿದೆ.
10 : ಒಂದು ದಿನ ನಾನು ಮೆಹೇಟಬೇಲನ ಮೊಮ್ಮಗನೂ ದೆಲಾಯನ ಮಗನೂ ಆದ ಶೆಮಾಯನ ಮನೆಗೆ ಹೋದೆ. ಅವನು ಅಲ್ಲಿ ಅವಿತುಕೊಂಡಿದ್ದನು. ಅವನು ನನಗೆ, “ನಿನ್ನನ್ನು ಕೊಲ್ಲುವುದಕ್ಕೆ ಬರುತ್ತಾರೆ; ಈ ರಾತ್ರಿಯೇ ಬರುತ್ತಾರೆ! ಆದುದರಿಂದ ನಾವಿಬ್ಬರೂ ದೇವಾಲಯಕ್ಕೆ ಹೋಗಿ ಗರ್ಭಗುಡಿಯನ್ನು ಸೇರಿ ಅದರ ಕದಗಳನ್ನು ಮುಚ್ಚಿಕೊಳ್ಳೋಣ ಬಾ.” ಎಂದು ಹೇಳಿದನು.
11 : ಅದಕ್ಕೆ ನಾನು, “ನನ್ನಂಥ ಗಂಡು ಓಡಿಹೋಗಿ ಅವಿತುಕೊಳ್ಳುವುದು ಸರಿಯೇ? ಇದಲ್ಲದೆ ಪ್ರಾಣರಕ್ಷಣೆಗಾಗಿ ಗರ್ಭಗುಡಿಯನ್ನು ನಾನು ಪ್ರವೇಶಿಸಬಹುದೇ? ಇಲ್ಲ, ನಾನು ಬರುವುದಿಲ್ಲ,” ಎಂದು ಉತ್ತರಕೊಟ್ಟೆ.
12 : ನಾನು ಸೂಕ್ಷ್ಮವಾಗಿ ವಿಚಾರಮಾಡಿದಾಗ, ನನ್ನ ಬಗ್ಗೆ ಆ ಕಾಲಜ್ಞಾನ ವಚನವನ್ನು ಉಚ್ಚರಿಸುವುದಕ್ಕೆ ಇವನನ್ನು ಪ್ರೇರಿಸಿದವರು ದೇವರಲ್ಲ; ಟೋಬೀಯನೂ ಸನ್ಬಲ್ಲಟನೂ ಇವನಿಗೆ ಲಂಚಕೊಟ್ಟು ಹಾಗೆ ಹೇಳಿಸಿದರೆಂದು ನನಗೆ ಗೊತ್ತು ಆಯಿತು.
13 : ನಾನು ಅಂಜಿಕೊಂಡು, ಇವನ ಮಾತಿನಂತೆ ನಡೆದು ದೋಷಿಯಾಗಿ, ತಮ್ಮ ನಿಂದೆಗೂ ಕೆಟ್ಟ ಹೆಸರಿಗೂ ಗುರಿಯಾಗಲಿ ಎಂದು ಅವರು ಈ ಶೆಮಾಯನಿಗೆ ಲಂಚಕೊಟ್ಟಿದ್ದರು.
14 : ಓ ದೇವರೇ, ಟೋಬೀಯ-ಸನ್ಬಲ್ಲಟರು ಮಾಡಿದ ಈ ದುಷ್ಕøತ್ಯಗಳು ನಿಮ್ಮ ನೆನಪಿನಲ್ಲಿರಲಿ; ನನ್ನನ್ನು ಹೆದರಿಸುವುದಕ್ಕೆ ಪ್ರಯತ್ನಿಸಿದ ಪ್ರವಾದಿನಿಯಾದ ನೋವದ್ಯ ಮುಂತಾದ ಪ್ರವಾದಿಗಳನ್ನು ಮರೆಯಬೇಡಿ,” ಎಂದು ನಾನು ಪ್ರಾರ್ಥಿಸಿದೆ.
15 : ಗೋಡೆಯು ಭಾದ್ರಪದ ಮಾಸದ ಇಪ್ಪತ್ತೈದನೆಯ ದಿನದಲ್ಲಿ ಮುಗಿಯಿತು. ಅದನ್ನು ಕಟ್ಟುವುದಕ್ಕೆ ಒಟ್ಟು ಐವತ್ತೆರಡು ದಿನಗಳು ಹಿಡಿದವು.
16 : ಈ ಸುದ್ದಿ ಸುತ್ತ-ಮುತ್ತಲಿನ ನಮ್ಮ ವಿರೋಧಿಗಳಾದ ಜನಾಂಗಗಳಿಗೆ ಮುಟ್ಟಿತು. ಅವರು ಭಯಭೀತರಾದರು. ಸೊಕ್ಕು ಮುರಿದವರಾಗಿ ಹಾಗೇ ಕುಗ್ಗಿಹೋದರು. ಈ ಕಾರ್ಯ ನಮ್ಮ ದೇವರಿಂದಲೇ ಪೂರ್ಣಗೊಂಡಿತು ಎಂದು ಅವರಿಗೆ ಮನದಟ್ಟಾಯಿತು.
17 : ಅದೇ ಸಮಯದಲ್ಲಿ, ಯೆಹೂದ್ಯ ಶ್ರೀಮಂತರಿಗೂ ಟೋಬೀಯನಿಗೂ ಬಹಳ ಪತ್ರ ವ್ಯವಹಾರ ನಡೆಯುತ್ತಿತ್ತು.
18 : ಏಕೆಂದರೆ ಅವನು ಆರಹನ ಮಗ ಶೆಕನ್ಯನ ಅಳಿಯನಾಗಿದ್ದ ಹಾಗು ಯೆಹೋಹಾನಾನನೆಂಬ ಅವನ ಮಗ ಬೆರೆಕ್ಕನ ಮಗನಾದ ಮೆಷುಲ್ಲಾಮನ ಮಗಳನ್ನು ಮದುವೆ ಮಾಡಿಕೊಂಡಿದ್ದ. ಆದ್ದರಿಂದ ಯೆಹೂದ್ಯರಲ್ಲಿ ಅನೇಕರು ಅವನಿಗೆ ಪ್ರಮಾಣಮಾಡಿ ಅವನ ಪಕ್ಷದವರಾಗಿದ್ದರು.
19 : ಅವರು ಅವನ ಒಳ್ಳೆತನವನ್ನೇ ನನ್ನ ಮುಂದೆ ವರ್ಣಿಸುತ್ತಾ ನನ್ನ ಮಾತುಗಳನ್ನು ಅವನಿಗೆ ತಿಳಿಸುತ್ತಾ ಇದ್ದರು. ಟೋಬೀಯನೂ ನನ್ನಲ್ಲಿ ಭಯಹುಟ್ಟಿಸುವುದಕ್ಕಾಗಿ ನನಗೆ ಪತ್ರಗಳನ್ನು ಕಳುಹಿಸುತ್ತಿದ್ದನು.

Holydivine