Nehemiah - Chapter 11
Holy Bible

1 : ಇಸ್ರಯೇಲರ ಪ್ರಮುಖರು ಮಾತ್ರ ಜೆರುಸಲೇಮಿನಲ್ಲಿ ವಾಸಿಸುತ್ತಿದ್ದರು. ಉಳಿದ ಜನರೊಳಗೆ ಹತ್ತುಹತ್ತು ಮಂದಿಯಲ್ಲಿ ಒಂಬತ್ತು ಮಂದಿ ತಮ್ಮ ತಮ್ಮ ಊರುಗಳಲ್ಲಿ ಇದ್ದುಕೊಂಡು, ಒಬ್ಬನು ಪವಿತ್ರ ನಗರವಾದ ಜೆರುಸಲೇಮಿನಲ್ಲಿ ವಾಸಿಸುವುದಕ್ಕಾಗಿ ಅಲ್ಲಿಗೆ ಬರುವಂತೆ ಚೀಟುಹಾಕಿ ಗೊತ್ತುಮಾಡಿದರು.
2 : ಮತ್ತು ಸ್ವಂತ ಇಚ್ಛೆಯಿಂದ ಜೆರುಸಲೇಮಿನಲ್ಲಿ ವಾಸಿಸುವುದಕ್ಕೆ ಮನಸ್ಸು ಮಾಡಿದಂಥವರನ್ನು ಜನರು ಆಶೀರ್ವದಿಸಿದರು.
3 : ಯೆಹೂದ ಕುಲದವರಲ್ಲಿ - ಒಬ್ಬನು ಅತಾಯ; ಇವನು ಉಜ್ಜೀಯನ ಮಗ; ಇವನು ಜೆಕರ್ಯನ ಮಗ;
4 : ಇವನು ಅಮರ್ಯನ ಮಗ; ಇವನು ಶೆಫಟ್ಯನ ಮಗ; ಇವನು ಮಹಲಲೇಲನ ಮಗ; ಇವನು ಪೆರೆಚ್ ಸಂತಾನದವನು.
5 : ಇನ್ನೊಬ್ಬನು ಮಾಸೇಯ; ಇವನು ಬಾರೂಕನ ಮಗ; ಇವನು ಕೊಲ್ರ್ಹೇಜೆಯ ಮಗ; ಇವನು ಹಜಾಯನ ಮಗ; ಇವನು ಆದಾಯನ ಮಗ; ಇವನು ಯೋಯಾರೀಬನ ಮಗ; ಇವನು ಜೆಕರ್ಯನ ಮಗ; ಇವನು ಶೇಲಹನ ಸಂತಾನದವನು.
6 ಜೆರುಸಲೇಮಿನಲ್ಲಿ ವಾಸಿಸುತ್ತಿದ್ದ ಪೆರೆಚ್ ಸಂತಾನದ ರಣವೀರರು ನಾನೂರ ಅರವತ್ತೆಂಟು ಮಂದಿ
7 : ಬೆನ್ಯಾಮೀನ್ ಕುಲದವರಲ್ಲಿ - ಸಲ್ಲು; ಇವನು ಮೆಷುಲ್ಲಾಮನ ಮಗ; ಇವನು ಯೋವೇದನ ಮಗ; ಇವನು ಪೆದಾಯನ ಮಗ; ಇವನು ಕೋಲಾಯನ ಮಗ; ಇವನು ಮಾಸೇಯನ ಮಗ; ಇವನು ಈತೀಯೇಲನ ಮಗ; ಇವನು ಯೆಶಾಯನ ಮಗ
8 : ರಣವೀರರಾದ ಇವನ ಬಂಧುಜನರು ಒಂಬೈನೂರಿಪ್ಪತ್ತೆಂಟು ಮಂದಿ.
9 : ಜೆಕ್ರಿಯ ಮಗನಾದ ಯೋವೇಲನು ಇವರ ನಾಯಕ; ಹಸ್ಸೆನೂವನ ಮಗನಾದ ಯೆಹೂದನು ಎರಡನೆಯ ಪುರಾಧಿಕಾರಿ.
10 : ಯಾಜಕರಲ್ಲಿ - ಯೆದಾಯ, ಯೋಯಾರೀಬ್, ಯಾಕೀನ್, ಅಹೀಟೂಬನ
11 : ಸಂತಾನದವನಾದ ಮೆರಾಯೋತನಿಂದ ಹುಟ್ಟಿದ ಚಾದೋಕನ ಮರಿಮಗನೂ ಮೆಷುಲ್ಲಾಮನ ಮೊಮ್ಮಗನೂ ಹಿಲ್ಕೀಯನ ಮಗನೂ ದೇವಾಲಯದ ಅಧಿಪತಿಯೂ ಆದ ಸೆರಾಯ, ಇವರು.
12 : ಇವರೂ ದೇವಾಲಯದ ಸೇವೆ ನಡೆಸುತ್ತಿದ್ದ ಇವರ ಬಂಧುಗಳೂ ಎಂಟು ನೂರಿಪ್ಪತ್ತ ಎರಡು ಮಂದಿ. ಇವರಲ್ಲದೆ ಅದಾಯನೆಂಬವನು ಇನ್ನೊಬ್ಬನು. ಇವನು ಯೆರೋಹಾಮನ ಮಗ; ಇವನು ಪೆಲಲ್ಯನ ಮಗ; ಇವನು ಅಮ್ಚೀಯ ಮಗ; ಇವನು ಜೆಕರ್ಯನ ಮಗ; ಇವನು ಪಷ್ಹೂರನ ಮಗ; ಇವನು ಮಲ್ಕೀಯನ ಮಗ.
13 : ಗೋತ್ರಪ್ರಧಾನರಾದ ಈ ಅದಾಯನ ಬಂಧುಗಳು ಇನ್ನೂರನಾಲ್ವತ್ತೆರಡು ಮಂದಿ. ಅಮಷ್ಪೈ ಎಂಬುವನು ಮತ್ತೊಬ್ಬನು. ಇವನು ಅಜರೇಲನ ಮಗ; ಇವನು ಅಹಜೈಯ ಮಗ; ಇವನು ಮೆಷಿಲ್ಲೇಮೋತನ ಮಗ; ಇವನು ಇಮ್ಮೇರನ ಮಗ;
14 : ರಣವೀರರಾಗಿದ್ದ ಈ ಅಮಷ್ಪೈಯ ಬಂಧುಗಳು ನೂರಿಪ್ಪತ್ತೆಂಟು ಮಂದಿ. ಹಗ್ಗೆದೋಲೀಮನ ಮಗನಾದ ಜಬ್ದೀಯೇಲನು ಇವರ ನಾಯಕ.
15 : ಲೇವಿಯರಲ್ಲಿ - ಹಷ್ಷೂಬನ ಮಗನೂ ಅಜ್ರೀಕಾಮನ ಮೊಮ್ಮಗನೂ ಹಷಬ್ಯನ ಮರಿಮಗನೂ ಬುನ್ನೀ ವಂಶದವನೂ ಆದ ಶೆಮಾಯನು;
16 : ಲೇವಿಗೋತ್ರಪ್ರಧಾನರಲ್ಲಿ ದೇವಾಲಯದ ಲೌಕಿಕ ಕಾರ್ಯಗಳ ಮೇಲ್ವಿಚಾರಕರಾದ ಶಬ್ಬೆತೈ, ಯೋಜಾಬಾದ್ ಎಂಬವರು;
17 : ಮೀಕನ ಮಗ ಜಬ್ದೀಯ ಮೊಮ್ಮಗ, ಆಸಾಫನ ಮರಿಮಗ ಪ್ರಾರ್ಥನಾ ಸಮಯದಲ್ಲಿ ಕೃತಜ್ಞತಾ ಸ್ತುತಿಮಾಡಿರಿ ಎಂದು ಹೇಳಿ ಭಜಕರನ್ನು ನಡೆಸುತ್ತಿದ್ದ ಮತ್ತನ್ಯ, ತನ್ನ ಬಂಧುಗಳಲ್ಲಿ ದ್ವಿತೀಯ ಸ್ಥಾನದವನಾದ ಬಕ್ಬುಕ್ಯ, ಶಮ್ಮೂವನ ಮಗನು; ಗಾಲಾಲನ ಮೊಮ್ಮಗನು, ಯೆದೂತೂನನ ಮರಿಮಗನು ಆದ ಅಬ್ದ ಎಂಬವರು.
18 : ಪರಿಶುದ್ಧ ನಗರದಲ್ಲಿದ್ದ ಎಲ್ಲ ಲೇವಿಯರು ಇನ್ನೂರ ಎಂಬತ್ತನಾಲ್ಕು ಮಂದಿ.
19 : ದ್ವಾರಪಾಲಕರಲ್ಲಿ - ಅಕ್ಕೂಬ್ ಟಲ್ಮೋನರೂ ಬಾಗಿಲುಗಳನ್ನು ಕಾಯುತ್ತಿದ್ದ ಇವರ ಬಂಧುಗಳೂ; ಒಟ್ಟು ನೂರೆಪ್ಪತ್ತೆರಡು ಮಂದಿ.
20 : ಉಳಿದ ಇಸ್ರಯೇಲರು, ಯಾಜಕರು ಹಾಗು ಲೇವಿಯರು ತಮ್ಮ ತಮ್ಮ ಸೊತ್ತುಗಳಿದ್ದ ಜುದೇಯದ ಎಲ್ಲ ಪಟ್ಟಣಗಳಲ್ಲಿ ವಾಸಿಸುತ್ತಿದ್ದರು.
21 : ದೇವಸ್ಥಾನದ ದಾಸರು ಓಪೇಲ್ ಗುಡ್ಡದಲ್ಲಿ ವಾಸಿಸುತ್ತಿದ್ದರು. ಚೀಹ, ಗಿಷ್ಟ ಎಂಬವರು ಇವರ ನಾಯಕರು.
22 : ದೇವಾಲಯ ಸೇವಾಸಂಬಂಧದಲ್ಲಿ ಗಾಯಕರಾದ ಆಸಾಫ್ಯರಿಗೆ ಸೇರಿದ ಬಾನೀಯ ಮಗನೂ ಹಷಬ್ಯನ ಮೊಮ್ಮಗನೂ ಮತ್ತನ್ಯನ ಮರಿಮಗನೂ ಮೀಕನ ವಂಶದವನೂ ಆದ ಉಜ್ಜೀಯು ಜೆರುಸಲೇಮಿನಲ್ಲಿದ್ದ ಲೇವಿಯರ ನಾಯಕನು.
23 : ಇವರ ಮತ್ತು ಗಾಯಕರ ಅನುದಿನದ ಕರ್ತವ್ಯಾಂಶಗಳ ವಿಷಯವಾಗಿ ರಾಜನಿಯಮವಿತ್ತು.
24 : ಮೆಷೇಜಬೇಲನ ಮಗನೂ ಜೆರಹನ ಸಂತಾನದವನೂ ಯೆಹೂದ ಕುಲದವನೂ ಆದ ಪೆತಹ್ಯನು ಪ್ರಜೆಗಳ ಎಲ್ಲ ಕಾರ್ಯಗಳ ಸಂಬಂಧದಲ್ಲಿ ರಾಜನ ಕಾರಭಾರಿಯಾಗಿದ್ದನು.
25 : ಹೊಲಗದ್ದೆಗಳಿದ್ದವರು ವಾಸಿಸುತ್ತಿದ್ದ ಊರುಗಳು - ಕಿರ್ಯತರ್ಬ, ದೀಬೋನ್, ಯೆಕಬ್ಜೆಯೇಲ್, ಇವುಗಳೂ ಇವುಗಳ ಗ್ರಾಮಗಳೂ;
26 : ಯೇಷೂವ, ಮೋಲಾದ,
27 : ಬೇತ್ಪೆಲೆಟ್, ಹಚರ್ಷೂವಲ್ ಇವುಗಳೂ ಬೇರ್ಷೆಬವೂ ಅದರ ಗ್ರಾಮಗಳೂ;
28 : ಚಿಕ್ಲಗ್‍ಊರೂ ಮೆಕೋನವೂ ಅದರ ಗ್ರಾಮಗಳೂ;
29 : ಏನ್ರಿಮ್ಮೋನ್, ಚೊರ್ರ,
30 : ಯರ್ಮೂತ್ ಇವುಗಳೂ ಇವುಗಳ ಗ್ರಾಮಗಳೂ, ಲಾಕೀಷ್ ಊರೂ ಇದರ ಪ್ರಾಂತ್ಯಗಳೂ, ಅಜೇಕವೂ ಅದರ ಗ್ರಾಮಗಳು; ಇವು ಯೆಹೂದ ಕುಲದವರ ನಿವಾಸಸ್ಥಾನಗಳು. ಅವರು ಬೇರ್ಷೆಬದಿಂದ ಹಿನ್ನೋಮ್ ಕಣಿವೆಯವರೆಗೂ ವಾಸಿಸುತ್ತಿದ್ದರು.
31 : ಗೆಬ, ಮಿಕ್ಮಾಷ್, ಅಯ್ಯಾ, ಗ್ರಾಮ ಸಹಿತವಾದ ಬೇತೇಲ್ ಎಂಬ ಊರುಗಳು;
32 : ಅನಾತೋತ್, ನೋಬ್,
33 : ಅನನ್ಯ, ಹಾಜೋರ್, ರಾಮಾ, ಗಿತ್ತಯೆಮ್,
34 : ಹಾದೀದ್, ಚೆಬೋಯೀಮ್, ನೆಬಲ್ಲಾಟ್, ಲೋದ್,
35 : ಓನೋ, ಗೇಹರಾಷೀಮ್ ಎಂಬ ಊರುಗಳು, ಇವು ಬೆನ್ಯಾಮೀನ್ ಕುಲದವರ ನಿವಾಸಸ್ಥಾನಗಳು.
36 : ಲೇವಿಯರಲ್ಲಿ ಕೆಲವು ವರ್ಗಗಳವರು ಯೆಹೂದ್ಯರಲ್ಲಿ, ಕೆಲವರು ಬೆನ್ಯಾಮೀನ್ಯರಲ್ಲಿ, ವಾಸಿಸುತ್ತಿದ್ದರು.

Holydivine