Nehemiah - Chapter 4
Holy Bible

1 : ನಾವು ಪೌಳಿಗೋಡೆಯನ್ನು ಕಟ್ಟುತ್ತಿದ್ದ ಸುದ್ದಿ ಸನ್ಬಲ್ಲಟನಿಗೆ ಮುಟ್ಟಿತು. ಅವನು ಬಹಳ ಹೊಟ್ಟೆಕಿಚ್ಚಿನ ಹಾಗು ಸಿಡುಕಿನ ವ್ಯಕ್ತಿ.
2 : “ನನ್ನ ಸಹೋದರರ ಮುಂದೆ ಹಾಗು ಸಮಾರಿಯದ ದಂಡಿನವರ ಮುಂದೆ ಅಶಕ್ತರಾದ ಈ ಯೆಹೂದ್ಯರು ಮಾಡುವುದಾದರೂ ಏನು? ಇವರು ತಮ್ಮನ್ನೇ ಬಲಪಡಿಸಿಕೊಳ್ಳಬೇಕೆಂದು ಇರುವರೋ? ಬಲಿಯರ್ಪಿಸುವರೋ? ಈ ದಿನವೇ ಈ ಕೆಲಸವನ್ನು ಮಾಡಿಮುಗಿಸುವರೋ? ಈ ದಿನವೇ ಈ ಕೆಲಸವನ್ನು ಮಾಡಿಮುಗಿಸುವರೋ? ಸುಟ್ಟುಹೋದ ಪಟ್ಟಣದ ಬೂದಿಯ ರಾಶಿಯೊಳಗೆ ಹುದುಗಿಹೋದ ಕಲ್ಲುಗಳನ್ನು ಬದುಕಿಸುವರೋ?” ಎಂದು ಹೇಳಿ ಯೆಹೂದ್ಯರನ್ನು ಪರಿಹಾಸ್ಯ ಮಾಡಿದನು.
3 ಅವನ ಬಳಿಯಲ್ಲೇ ನಿಂತಿದ್ದ ಅಮ್ಮೋನಿಯನಾದ ಟೋಬೀಯನು, “ಅವರು ಕಟ್ಟುವ ಕಲ್ಲು ಗೋಡೆಯ ಮೇಲೆ ನರಿ ಹಾರಿದರೆ ಅದು ಬಿದ್ದುಹೋಗುವುದು!” ಎಂದು ಅಣಕಿಸಿದನು.
4 “ನಮ್ಮ ದೇವರೇ ಆಲಿಸಿ: ಅವರು ನಮ್ಮನ್ನು ಎಷ್ಟು ಹೀಯಾಳಿಸುತ್ತಾರೆ! ಈ ನಿಂದೆಯನ್ನು ಅವರ ತಲೆಯ ಮೇಲೆಯೇ ಬರಮಾಡಿ. ಅವರು ದೇಶಭ್ರಷ್ಟರಾಗಿ ಸೂರೆಹೋಗುವಂತೆ ಮಾಡಿ.
5 : ಅವರ ಅಪರಾಧವನ್ನು ಕ್ಷಮಿಸಬೇಡಿ. ನಿಮ್ಮೆದುರಿಗಿರುವ ಅವರ ಪಾಪವನ್ನು ಅಳಿಸಿಬಿಡಬೇಡಿ. ಏಕೆಂದರೆ ಕಟ್ಟುವವರ ಮುಂದೆಯೇ ಅವರು ನಿಮ್ಮನ್ನು ಕೆಣಕಿದ್ದಾರೆ,” ಎಂದು ನಾನು ಪ್ರಾರ್ಥಿಸಿದೆ.
6 : ಇದಾದ ಮೇಲೆ ನಾವು ಕಟ್ಟುವ ಕೆಲಸವನ್ನು ಮುಂದುವರಿಸಿದೆವು. ಜನರು ಮನಸ್ಸುಮಾಡಿ ಅರ್ಧಗೋಡೆಯನ್ನು ಕಟ್ಟಿದರು.
7 : ಸನ್ಬಲ್ಲಟನು, ಟೋಬೀಯನು, ಅರೇಬಿಯರು, ಅಮ್ಮೋನಿಯರು ಹಾಗು ಅಷ್ಡೋದಿನವರು ಜೆರುಸಲೇಮಿನ ಗೋಡೆಯ ದುರಸ್ತಿಕಾರ್ಯ ಮುಂದುವರಿದಿದೆ ಹಾಗು ಅದರ ಸಂದುಗಳು ಮತ್ತೆ ಮುಚ್ಚಿಕೊಳ್ಳುತ್ತಿವೆ ಎಂಬುದನ್ನು ಕೇಳಿದರು.
8 : ಅವರಿಗೆ ಬಹು ಕೋಪ ಬಂದಿತು. “ನಾವು ಒಟ್ಟಾಗಿ ಜೆರುಸಲೇಮಿನವರ ವಿರುದ್ಧ ಯುದ್ಧಕ್ಕೆ ಹೋಗಿ ಅವರನ್ನು ತಳಮಳಗೊಳಿಸೋಣ,” ಎಂದು ಒಳಸಂಚು ಮಾಡಿಕೊಂಡರು.
9 : ನಾವಾದರೋ ನಮ್ಮ ದೇವರಿಗೆ ಮೊರೆಯಿಟ್ಟು ಆ ಜನರು ಬರುವ ದಾರಿಯಲ್ಲಿ ಹಗಲಿರುಳು ಕಾವಲಿಟ್ಟೆವು.
10 : ಇತ್ತ ಯೆಹೂದ್ಯರೇ, “ಹೊರೆಹೊರುವವರ ಬಲ ಕುಂದಿಹೋಯಿತು. ಧೂಳಿನ ರಾಶಿ ವಿಪರೀತ ಆಗಿದೆ; ಈ ಗೋಡೆಯನ್ನು ಕಟ್ಟುವುದು ನಮ್ಮಿಂದಾಗದು,” ಎಂದರು.
11 : ಅತ್ತ ನಮ್ಮ ವಿರೋಧಿಗಳು, “ಅವರಿಗೆ ತಿಳಿಯದೆ, ಗೋಚರವಾಗದೆ, ಫಕ್ಕನೆ ಅವರೊಳಗೆ ನುಗ್ಗಿ ಅವರನ್ನು ಕೊಂದು ಕೆಲಸವನ್ನು ನಿಲ್ಲಿಸಿಬಿಡೋಣ,” ಎಂದುಕೊಳ್ಳುತ್ತಿದ್ದರು.
12 : ಅವರ ನೆರೆಯೂರುಗಳಲ್ಲಿ ವಾಸಿಸುತ್ತಿದ್ದ ಯೆಹೂದ್ಯರು ಬಂದು, “ನೀವು ಯಾವ ಕಡೆಗೆ ತಿರುಗಿಕೊಂಡರೂ ಆ ಎಲ್ಲಾ ಕಡೆಗಳಿಂದ ನಮಗೆ ವಿರೋಧವಾಗಿ ಯುದ್ಧಕ್ಕೆ ಬರುತ್ತಾರೆ,” ಎಂದು ಪದೇ ಪದೇ ತಿಳಿಸುತ್ತಿದ್ದರು.
13 : ಆಗ ನಾನು ಜನರಿಗೆ, “ಕತ್ತಿ, ಬಿಲ್ಲು, ಬರ್ಜಿಗಳನ್ನು ಹಿಡಿದುಕೊಂಡು ಗೋಡೆಯ ಹಿಂದಣ ತಗ್ಗಾದ ಬಯಲುಗಳಲ್ಲಿ ಗೋತ್ರಗೋತ್ರಗಳಾಗಿ ನಿಲ್ಲಿ,” ಎಂದು ಆಜ್ಞಾಪಿಸಿದೆ.
14 : ಅವರನ್ನು ಸಂದರ್ಶಿಸಿ, ಅವರ ಮುಂದೆ ನಿಂತು, ಶ್ರೀಮಂತರನ್ನೂ ಅಧಿಕಾರಗಳನ್ನೂ ಉಳಿದ ಜನರನ್ನೂ ಸಂಬೋಧಿಸಿ, “ನಿಮ್ಮ ಹಗೆಗಳಿಗೆ ಹೆದರಬೇಡಿ; ಮಹೋನ್ನತರೂ ಭಯಭಕ್ತಿಗೆ ಪಾತ್ರರೂ ಆದ ಸರ್ವೇಶ್ವರಸ್ವಾಮಿಯನ್ನು ಸ್ಮರಿಸಿಕೊಂಡು, ನಿಮ್ಮ ಸಹೋದರರಿಗಾಗಿ, ಮಡದಿ ಮಕ್ಕಳಿಗಾಗಿ ಹಾಗು ನಿಮ್ಮ ಮನೆಮಠಗಳಿಗಾಗಿ ಕಾದಾಡಿರಿ,” ಎಂದು ಹುರಿದುಂಬಿಸಿದೆ.
15 : ನಮ್ಮ ಶತ್ರುಗಳು ತಮ್ಮ ಹಂಚಿಕೆ ನಮಗೆ ಗೊತ್ತಾಯಿತೆಂದೂ ದೇವರು ಅದನ್ನು ವ್ಯರ್ಥಮಾಡಿದರೆಂದೂ ತಿಳಿದುಕೊಂಡರು. ನಮ್ಮನ್ನು ಬಿಟ್ಟುಹೋದರು; ನಾವೆಲ್ಲರು ನಮ್ಮ ನಮ್ಮ ಗೋಡೆಯ ಕೆಲಸಕ್ಕೆ ಮತ್ತೆ ಕೈಹಾಕಿದೆವು
16 : ಅಂದಿನಿಂದ ನನ್ನ ಸ್ವಂತ ಆಳುಗಳಲ್ಲಿ ಅರ್ಧಮಂದಿ ಕಟ್ಟಡ ಕೆಲಸದಲ್ಲಿ ನಿರತರಾದರು. ಅರ್ಧ ಮಂದಿ ಕವಚವನ್ನು ಧರಿಸಿಕೊಂಡು ಬರ್ಜಿ, ಗುರಾಣಿ, ಬಿಲ್ಲುಗಳನ್ನು ಹಿಡಿದುಕೊಂಡು ನಿಂತರು. ಅದೇ ಪ್ರಕಾರ ಅಧಿಕಾರಿಗಳೂ ಗೋಡೆ ಕಟ್ಟುವ ಯೆಹೂದ್ಯರ ಹಿಂದೆ ನಿಂತರು.
17 : ಹೊರೆ ಹೊರುವವರೂ ಒಂದು ಕೈಯಿಂದ ಹೊರೆಹೊತ್ತು ಇನ್ನೊಂದು ಕೈಯಿಂದ ಈಟಿ ಹಿಡಿದುಕೊಳ್ಳುತ್ತ ಇದ್ದರು.
18 : ಕಟ್ಟುವವರಲ್ಲಿ ಪ್ರತಿಯೊಬ್ಬನೂ ತನ್ನ ತನ್ನ ಕತ್ತಿಯನ್ನು ಸೊಂಟಕ್ಕೆ ಬಿಗಿದುಕೊಳ್ಳುತ್ತ ಇದ್ದನು. ನಾನಂತೂ ಕಹಳೆ ಊದುವವನೊಬ್ಬನನ್ನು ನನ್ನ ಬಳಿಯಲ್ಲೇ ಇರಿಸಿಕೊಂಡಿದ್ದೆ,
19 : ಶ್ರೀಮಂತರಿಗು, ಅಧಿಕಾರಿಗಳು ಹಾಗು ಉಳಿದ ಜನರಿಗು, “ನಾವು ಮಾಡುವ ಕೆಲಸ ದೊಡ್ಡದು, ಹಲವಾರು ಎಡೆಗಳಲ್ಲಿ ನಡೆಯುವಂಥದ್ದು; ನಾವು ಗೋಡೆಯ ನಿಮಿತ್ತ ಒಬ್ಬರಿಂದ ಒಬ್ಬರು ದೂರವಾಗಿರುತ್ತೇವೆ.
20 : ನಿಮಗೆ ಕಹಳೆಯ ಧ್ವನಿ ಕೇಳಿದಕೂಡಲೆ, ನಮ್ಮ ಬಳಿಗೆ ಕೂಡಿಬನ್ನಿರಿ. ನಮ್ಮ ದೇವರು ನಮ್ಮ ಪರವಾಗಿ ಯುದ್ಧಮಾಡುವರು,” ಎಂದು ಹೇಳಿದ್ದೆ.
21 : ಹೀಗೆ ನಾವು ಅರುಣೋದಯದಿಂದ ನಕ್ಷತ್ರಗಳು ಮೂಡುವವರೆಗೂ ಕೆಲಸ ಮಾಡುತ್ತಿದ್ದೆವು; ನನ್ನ ಸೇವಕರಲ್ಲಿ ಅರ್ಧ ಮಂದಿ ಬರ್ಜಿ ಹಿಡಿದುಕೊಂಡಿದ್ದರು.
22 : ಇದಲ್ಲದೆ, ನಾನು ಮೇಸ್ತ್ರಿಗಳಿಗೆ, “ನಿಮ್ಮ ಆಳುಗಳು ರಾತ್ರಿಯಲ್ಲಿ ನಮಗೆ ಕಾವಾಲಾಗಿರಲು ಹಾಗು ಹಗಲಿನಲ್ಲಿ ಕೆಲಸ ಮಾಡಲು ಸಾಧ್ಯವಾಗುವಂತೆ, ನೀವು ನಿಮ್ಮ ನಿಮ್ಮ ಆಳುಗಳೊಡನೆ ಜೆರುಸಲೇಮಿನಲ್ಲೇ ವಾಸ ಮಾಡಬೇಕು,” ಎಂದು ಅಪ್ಪಣೆಮಾಡಿದ್ದೆ.
23 : ನಾನು, ನನ್ನ ಸಹೋದರರು, ಸೇವಕರು ಹಾಗು ಮೈಗಾವಲಿನವರು ಸ್ನಾನ ಸಮಯದಲ್ಲಿ ಹೊರತು, ಬೇರೆ ಸಮಯದಲ್ಲಿ ನಮ್ಮ ಬಟ್ಟೆಗಳನ್ನು ತೆಗೆದು ಹಾಕುತ್ತಿರಲಿಲ್ಲ.

Holydivine