Lamentations - Chapter 5
Holy Bible

1 : ‘ಹೇ, ಸರ್ವೇಶ್ವರಾ, ನಮಗೊದಗಿರುವ ದುರ್ಗತಿಯನ್ನು ನೆನೆಸಿಕೊ ನಾವು ಸಹಿಸುತ್ತಿರುವ ನಿಂದೆ ಅವಮಾನಗಳನ್ನು ಗಮನಕ್ಕೆ ತಂದುಕೋ.
2 : ನಮ್ಮ ಆಸ್ತಿಪಾಸ್ತಿ ಪರರ ಪಾಲಗಿದೆ ನಮ್ಮ ಮನೆಮಾರುಗಳು ಹೆರವರ ವಶದಲ್ಲಿವೆ.
3 : ನಾವು ತಂದೆಯಿಲ್ಲದ ಅನಾಥರು ನಮ್ಮ ತಾಯಿಗಳು ವಿಧವೆಯರು.
4 : ನೀರು ನಮ್ಮದಾದರೂ ಕೊಂಡುಕೊಂಡು ಕುಡಿಯುತ್ತಿದ್ದೇವೆ ಸೌದೆ ಸ್ವಂತವಾದರೂ ಕ್ರಯಕ್ಕೆ ತೆಗೆದುಕೊಳ್ಳುತ್ತಿದ್ದೇವೆ.
5 : ಹಿಂದಟ್ಟಿ ಬಂದವರು ಹಿಡಿದರು ನಮ್ಮ ಕುತ್ತಿಗೆ ಬಳಲಿ ಬೆಂಡಾಗಿದ್ದೇವೆ ವಿಶ್ರಾಂತಿಯಿಲ್ಲದೆ.
6 : ಹೊಟ್ಟೆಪಾಡಿಗಾಗಿ ಕೈ ಒಡ್ಡಿದ್ದೇವೆ ಈಜಿಪ್ಟರಿಗೆ, ಅಶ್ಯೂರ್ಯರಿಗೆ.
7 : ನಮ್ಮ ಪಿತೃಗಳು ಪಾಪಮಾಡಿ ಗತಿಸಿಹೋದರು ಅವರ ದೋಷಫಲವನ್ನು ನಾವು ಸವಿಯಬೇಕಾಗಿ ಬಂದಿತು.
8 : ದಾಸರುಗಳೇ ನಮಗೆ ದಣಿಗಳಾದರು ಅವರಿಂದ ನಮ್ಮನ್ನು ಬಿಡಿಸುವವರಾರೂ ಇಲ್ಲವಾದರು !
9 : ಪ್ರಾಣಾಪಾಯದಿಂದ, ಕಾಡಿನ ಕಟುಕರ ಭಯದಿಂದ ನಾವು ಪಡೆಯುತ್ತಿದ್ದೇವೆ ದವಸ ಧಾನ್ಯ.
10 : ಒಲೆಯಂತೆ ಸುಡುತ್ತಿದೆ ನಮ್ಮ ಚರ್ಮ ಕ್ಷಾಮಕಾಲದ ಭೀಕರ ಜ್ವರದ ನಿಮಿತ್ತ.
11 : ಅತ್ಯಾಚಾರ ನಡೆದಿದೆ ಸಿಯೋನ್ ಸತಿಯರ ಮೇಲೆ ಯೆಹೂದ ಊರುಗಳ ಯುವತಿಯರ ಮೇಲೆ !
12 : ನಮ್ಮ ನಾಯಕರ ಕೈಗಳನ್ನು ನೇತುಹಾಕಿದ್ದಾರೆ ಗಲ್ಲಿಗೆ ನಮ್ಮ ಹಿರಿಯರನ್ನು ಗುರಿಪಡಿಸಿದ್ದಾರೆ ಮಾನಭಂಗಕ್ಕೆ.
13 : ನಮ್ಮ ಯುವಕರಿಗೆ ಬೀಸುವ ಕಲ್ಲು ಹಿಡಿವ ಗತಿ ನಮ್ಮ ಮಕ್ಕಳಿಗೆ ಸೌದೆ ಹೊತ್ತು ಮುಗ್ಗರಿಸುವ ಪರಿಸ್ಥಿತಿ.
14 : ಮುದುಕರು ಇನ್ನು ಕೂರುತ್ತಿಲ್ಲ ಚಾವಡಿಗಳಲಿ ಯುವಕರು ಇನ್ನು ಹಿಡಿಯುತ್ತಿಲ್ಲ ವಾದ್ಯಗಳನ್ನು ಕೈಯಲ್ಲಿ.
15 : ಸಂತೋಷವು ನಮ್ಮ ಹೃದಯದಿಂದ ಮಾಯವಾಗಿದೆ ನಮ್ಮ ನಾಟ್ಯನಲಿವು ದುಃಖಕರವಾಗಿ ಮಾರ್ಪಟ್ಟಿದೆ.
16 : ನಮ್ಮ ಕಿರೀಟ ಬಿದ್ದುಹೋಗಿದೆ ತಲೆಮೇಲಿಂದ ಈ ಕೇಡೆಲ್ಲಾ ಬಂದೊದಗಿದೆ ನಮ್ಮ ಪಾಪದ ನಿಮಿತ್ತ.
17 : ಈ ಕಾರಣ, ನಮ್ಮ ಹೃದಯ ಕುಂದಿದೆ ಇದೇ ಕಾರಣ, ನಮ್ಮ ಕಣ್ಣು ಮೊಬ್ಬಾಗಿದೆ.
18 : ಸಿಯೋನ್ ಶ್ರೀ ಪರ್ವತ ಹಾಳಾಯಿತು ಅದು ಅಲೆದಾಡುವ ನರಿಗಳ ಬೀಡಾಯಿತು.
19 : ಹೇ ಸರ್ವೇಶ್ವರಾ, ನಿನ್ನ ರಾಜ್ಯ ಚಿರಕಾಲ ನಿನ್ನ ಸಿಂಹಾಸನ ತಲತಲಾಂತರಕ್ಕೂ ಸುಸ್ಥಿರ !
20 : ನಮ್ಮನ್ನೇಕೆ ಮರೆತುಬಿಟ್ಟೆ ಇಷ್ಟುಕಾಲ ನಮ್ಮನ್ನೇಕೆ ಕೈಬಿಟ್ಟೆ ಇಲ್ಲಿಯ ತನಕ?
21 : ಹೇ ಸರ್ವೇಶ್ವರಾ, ನಮ್ಮ ಮೇಲೆ ನೀ ಬಲು ಸಿಟ್ಟುಗೊಂಡಿರುವೆಯೋ? ಬಹುಶಃ ನಮ್ಮನ್ನು ಸಂಪೂರ್ಣವಾಗಿ ತ್ಯಜಿಸಿಬಿಟ್ಟಿರುವೆಯೋ?
22 : ತಿರುಗಿಸು ನಮ್ಮನ್ನು ನಿನ್ನ ಕಡೆಗೆ ತಿರುಗುವೆವು ನೀನು ತಿರುಗಿಸಿದ ಹಾಗೆ. ಪ್ರಾಚೀನ ವೈಭವವನ್ನು ಮರಳಿ ದಯಪಾಲಿಸು ನಮಗೆ.

Holydivine