Lamentations - Chapter 2
Holy Bible

1 : ಅಯ್ಯಯ್ಯೋ, ಸ್ವಾಮಿಯೆ ಸಿಟ್ಟುಗೊಂಡಿರುವನಲ್ಲಾ ! ಸಿಯೋನ್ ಕುವರಿಗೆ ಕಾರ್ಮೋಡ ಕವಿದಂತೆ ಮಾಡಿರುವನಲ್ಲಾ ! ಇಸ್ರಯೇಲಿನ ವೈಭವವನ್ನು ಆಗಸದಿಂದ ನೆಲಕ್ಕೆಸೆದುಬಿಟ್ಟಿರುವನಲ್ಲಾ ! ಆ ಸಿಟ್ಟಿನ ದಿನದಂದು ತನ್ನ ಪಾದಪೀಠವಾದ ದೇವಾಲಯವನ್ನೂ ನೆನೆಯದೆ ಹೋದನಲ್ಲಾ !
2 : ಸ್ವಾಮಿ ಯಕೋಬಿನ ನಿವಾಸಗಳನ್ನು ನಾಶಪಡಿಸಿಹನು, ರೌದ್ರದಿಂದ ಯೆಹೂದ ಕೋಟೆಗಳನ್ನು ನೆಲಸಮವಾಗಿಸಿಹನು, ರಾಜ್ಯವನ್ನೂ ಅದರ ಪಾಲಕರನ್ನೂ ನೀಚಸ್ಥಿತಿಗೆ ಇಳಿಸಿಹನು.
3 : ಶತ್ರು ಬಂದೆರಗಿದಾಗ ಸ್ವಾಮಿ ತನ್ನ ಶಕ್ತಿಯುತ ಕೈಯನ್ನು ಹಿಂದೆಗೆದುಬಿಟ್ಟ, ಇಸ್ರಯೇಲಿನ ಕೋಡನ್ನು ಕಡಿದು ಪುಡಿಪುಡಿ ಮಾಡಿಬಿಟ್ಟ, ಸುತ್ತುಗಟ್ಟಿ ನುಂಗುವ ಅಗ್ನಿಜ್ವಾಲೆಯಂತೆ ಯಕೋಬನನ್ನು ದಹಿಸಿಬಿಟ್ಟ.
4 : ಬಿಲ್ಲುಹಿಡಿದು ಬಂದ ಆತ ವೈರಿಯಂತೆ ಬಲಗೈಯೆತ್ತಿ ನಿಂತ ವಿರೋಧಿಯಂತೆ, ಸಂಹರಿಸಿಬಿಟ್ಟ ಸುಂದರ ಪ್ರಜೆಯೆಲ್ಲರನ್ನು ರೋಷಾಗ್ನಿ ಸುರಿಸಿ ಭಸ್ಮಮಾಡಿದ ಸಿಯೋನ್ ಗುಡಾರವನ್ನು.
5 : ಸ್ವಾಮಿಯೇ ಶತ್ರುವಾಗಿ ಕಬಳಿಸಿದ ಇಸ್ರಯೇಲನ್ನು ನಾಶಮಾಡಿದ ಅದರ ಅರಮನೆಗಳೆಲ್ಲವನ್ನು ನೆಲಸಮಗೊಳಿಸಿದ ಅದರ ಕೋಟೆಕೊತ್ತಲಗಳನ್ನು ಯಥೇಚ್ಛವಾಗಿಸಿದ ಯೆಹೂದ ನಾಡಿನ ಗೋಳಾಟವನ್ನು.
6 : ತನ್ನ ಗರ್ಭಗುಡಿಯನ್ನೂ ಉತ್ಸವಸ್ಥಾನವನ್ನೂ ಹಾಳುಮಾಡಿದ ತೋಟದ ಗುಡಿಸಲನ್ನೋ ಎಂಬಂತೆ. ಮಹೋತ್ಸವಗಳನ್ನೂ ಸಬ್ಬತ್‍ದಿನಗಳನ್ನೂ ಆಳಿಸಿಬಿಟ್ಟ ನೆನಪಿಗೂ ಬಾರದಂತೆ. ರಾಜರನ್ನೂ ಯಾಜಕರನ್ನೂ ಸರ್ವೇಶ್ವರ ಧಿಕ್ಕರಿಸಿದ ಅತಿ ರೋಷಾವೇಷಗೊಂಡವನಂತೆ.
7 : ಸ್ವಾಮಿ ತಿರಸ್ಕರಿಸಿಬಿಟ್ಟಿದ್ದಾನೆ ತನ್ನ ಬಲಿಪೀಠವನ್ನೇ ಅಸಹ್ಯಗೊಂಡು ತೊರೆದುಬಿಟ್ಟಿದ್ದಾನೆ ತನ್ನ ಪವಿತ್ರಸ್ಥಾನವನ್ನೇ ಸಿಯೋನ್ ಅರಮನೆಯ ಗೋಡೆಗಳನ್ನು ಕೆಡವಲು ಬಿಟ್ಟಿದ್ದಾನೆ ಹಗೆಗಳನ್ನೇ. ಹಬ್ಬಹರಿದಿನಗಳ ಜಯಘೋಷವೋ ಎಂಬಂತೆ ಘೋಷಣೆ ಹಾಕುತ್ತಿದ್ದಾರಲ್ಲಾ ಶತ್ರುಗಳು ಸರ್ವೇಶ್ವರನ ಮಂದಿರದಲ್ಲೆ !
8 : ಸಿಯೋನ್ ನಗರಿಯ ಕೋಟೆಯನ್ನು ನಾಶಪಡಿಸಲೆಂದು ಎಳೆದಿರುವನಲ್ಲಾ ಸರ್ವೇಶ್ವರ ಅಳತೆನೂಲನ್ನು ! ಹಾಳುಮಾಡುವ ತನ್ನ ಕೈಯನ್ನು ಹಿಂದೆಗೆಯದೆ ಬಿರುಕುಗೊಳಿಸಿದ್ದಾನೆ ಪೌಳಿಗೋಡೆಯನ್ನೇ, ಕೋಟೆಯನ್ನೇ. ಅವುಗಳೆರಡೂ, ಕುಸಿದು ಬಿದ್ದುಹೋಗಿವೆ.
9 : ಹೂತುಹೋಗಿವೆ ಸಿಯೋನ್ ಹೆಬ್ಬಾಗಿಲುಗಳು ಚೂರುಚೂರಾಗಿ ಬಿದ್ದಿವೆ ಅದರ ಅಗುಳಿಗಳು. ಅರಸರೂ ಪಾಲಕರೂ ಸೇರಿಹೋದರು ಅನ್ಯಜನಾಂಗಗಳೊಳು. ನಿಂತುಹೋಗಿವೆ ಧರ್ಮಶಾಸ್ತ್ರ ಬೋಧನೆಗಳು. ಸರ್ವೇಶ್ವರನಿಂದ ಪ್ರವಾದಿಗಳಿಗೆ ಆಗುತ್ತಿದ್ದ ದಿವ್ಯದರ್ಶನಗಳು.
10 : ತಲೆಯಮೇಲೆ ದೂಳನ್ನು ತೂರಿಕೊಂಡು ಗೋಣಿತಟ್ಟನ್ನು ಸೊಂಟಕ್ಕೆ ಸುತ್ತಿಕೊಂಡು ಕುಕ್ಕರಿಸಿಹರು ಸಿಯೋನ್ ನಗರಿಯ ಪ್ರಮುಖರು ತಲೆತಗ್ಗಿಸಿಹರು ಜೆರುಸಲೇಮಿನ ಯುವತಿಯರು.
11 : ಕಂಬನಿಗರೆದು ಇಂಗಿಹೋಗಿದೆ ಕಣ್ಣು ಕುದಿಯುತ್ತಿದೆ ನನ್ನೊಳಗೆ ಕರುಳು ! ನನ್ನ ಜನತೆಯೆಂಬ ಯುವತಿ ಹಾಳಾಗಿ ಮಕ್ಕಳು ಹಾದಿಬೀದಿಗಳಲ್ಲಿ ಮೂರ್ಛೆಹೋಗಿ ನನ್ನ ಕರುಳು ಕರಗಿಹೋಗಿದೆ ನೀರಾಗಿ.
12 : ‘ಅಮ್ಮಾ ತಿನ್ನಲಿಕ್ಕಿಲ್ಲವೆ? ಕುಡಿಯಲಿಕ್ಕಿಲ್ಲವೆ?’ ಎನ್ನುತ ಮಕ್ಕಳು ಮೂರ್ಛೆಗೊಂಡಿವೆ. ಗಾಯಗೊಂಡವರಂತೆ ನಗರದ ಚೌಕಗಳೊಳು ಪ್ರಾಣಬಿಡುತ್ತಿವೆಯಲ್ಲಾ ತಾಯಿಯ ಎದೆಯಮೇಲೆ ಆ ಹಸುಳೆಗಳು.
13 : ಎಲೌ ಜೆರುಸಲೇಮ್ ಯುವತಿಯೇ, ನಿನಗೆ ಏನು ಹೇಳಲಿ? ನಿನ್ನನ್ನು ಯಾವುದಕ್ಕೆ ಹೋಲಿಸಲಿ? ಸಿಯೋನ್ ಕನ್ಯೆಯೇ, ನಿನ್ನನ್ನು ಹೇಗೆ ಸಂತೈಸಲಿ? ಸಂತೈಸುವ ಸಾಮತಿಯನ್ನು ಎಲ್ಲಿಂದ ತರಲಿ? ನಿನಗೊದಗಿರುವ ನಾಶ ಸಾಗರದಂತೆ ಅಪಾರ ನಿನ್ನನ್ನು ಸ್ವಸ್ಥಗೊಳಿಸಲು ಯಾರಿಂದ ತಾನೆ ಸಾಧ್ಯ?
14 : ನಿನ್ನ ಪ್ರವಾದಿಗಳು ಕಂಡ ದರ್ಶನದಲ್ಲಿ ಸಾರವಿಲ್ಲ, ಅರ್ಥವಿಲ್ಲ. ನಿನ್ನ ದೋಷಗಳನ್ನು ಬೈಲಿಗಳೆಯಲು ಅವರಿಂದಾಗಲಿಲ್ಲ. ಈ ಕಾರಣ, ನಿನ್ನ ದುರವಸ್ಥೆಯನ್ನು ತಡೆಗಟ್ಟಲಾಗಲಿಲ್ಲ. ನಿನ್ನ ಬಗ್ಗೆ ಅವರು ನುಡಿದ ದೈವೋಕ್ತಿಗಳು ವ್ಯರ್ಥವಾದುವು. ನೀನು ಗಡಿಪಾರಾಗಿ ಹೋಗಲು ಅವು ಆಸ್ಪದವಾದುವು.
15 : ಹಾದು ಹೋಗುವವರೆಲ್ಲ ಕೈ ತಟ್ಟುತ್ತಾರಲ್ಲಾ ನಿನ್ನನ್ನು ನೋಡಿ ಜೆರುಸಲೇಮ್ ನಗರಿಯಾದ ನಿನ್ನನ್ನು ಗುರುತಿಸಿ ! “ಆಹಾ, ನೀನೇನೋ ಸರ್ವಾಂಗ ಸುಂದರಿ, ವಿಶ್ವಾನಂದದಾಯಕಿ!” ಎಂದು ಮೂದಲಿಸುತ್ತಾರಲ್ಲಾ ತಲೆಯಾಡಿಸಿ, ಸಿಳ್ಳುಹಾಕಿ!
16 : ನಿನ್ನನ್ನು ನೋಡಿ ಶತ್ರುಗಳೆಲ್ಲರು ಕಟಕಟನೆ ಹಲ್ಲು ಕಡಿಯುತ್ತಾರಲ್ಲಾ ಬಾಯಿಕಿಸಿದು ! “ಹಾ, ಆಕೆಯನ್ನು ಕಬಳಿಸಿಬಿಟ್ಟೆವು ಈ ದಿನಕ್ಕಾಗಿಯೆ ನಾವು ಕಾದಿದ್ದೆವು ಈಗ ಅದನ್ನು ಕಣ್ಣಾರೆ ಕಂಡೆವು” ಎಂದು ಕೊಚ್ಚಿಕೊಳ್ಳುತ್ತಾರಲ್ಲಾ!
17 : ಸರ್ವೇಶ್ವರ ಸಿದ್ಧಿಗೆ ತಂದಿದ್ದಾನೆ ತನ್ನ ಸಂಕಲ್ಪವನ್ನು ಈಡೇರಿಸಿದ್ದಾನೆ ಪುರಾತನ ಕಾಲದಲ್ಲಿ ತಾನು ನುಡಿದುದನ್ನು. ನಿನ್ನನ್ನು ಧ್ವಂಸಮಾಡಿದ್ದಾನೆ ದಯೆದಾಕ್ಷಿಣ್ಯವಿಲ್ಲದೆ. ಆನಂದ ತಂದಿದ್ದಾನೆ ವೈರಿಗಳಿಗೆ ಕೋಡುಮೂಡಿಸಿದ್ದಾನೆ ವಿರೋಧಿಗಳಿಗೆ !
18 : ನಿನ್ನ ಜನರು ಮೊರೆಯಿಡಲಿ ಮನಃಪೂರ್ವಕವಾಗಿ ಸಿಯೋನ್ ನಗರದ ಕೋಟೆಗೆ ಕೋಟೆಯೇ ಕಣ್ಣೀರಿಡಲಿ. ಹಗಲಿರುಳು ಕಂಬನಿ ಹರಿಯಲಿ ತೊರೆಯಂತೆ ನಿಮ್ಮ ನೇತ್ರಗಳಿಂದ ಸುರಿಯಲಿ ಒಂದೇ ಸಮನೆ.
19 : ರಾತ್ರಿಯ ಒಂದೊಂದು ಜಾವದಲ್ಲೂ ಎದ್ದುಗೋಳಾಡಿರಿ. ನಿಮ್ಮ ಹೃದಯ ಕರಗಿ, ನೀರಾಗಿ ಸ್ವಾಮಿಯ ಮುಂದೆ ಹರಿಯಲಿ. ನಿಮ್ಮ ಮಕ್ಕಳ ಪ್ರಾಣವನ್ನು ಉಳಿಸಬೇಕೆಂದು ಕೈ ಮುಗಿದು ಪ್ರಾರ್ಥನೆಮಾಡಿ. ಹಸಿವಿನಿಂದ ಅವು ಮೂರ್ಛೆಹೋಗಿವೆ, ಬೀದಿಯ ಮೂಲೆಮೂಲೆಗಳಲ್ಲಿ.
20 : ಹೇ, ಸರ್ವೇಶ್ವರಾ ಕಟಾಕ್ಷಿಸು ! ಇಷ್ಟೆಲ್ಲಾ ನೀ ಮಾಡಿದ್ದು ಯಾರಿಗೆಂದು ಯೋಚಿಸು ! ತಾಯಂದಿರು ತಿನ್ನಬೇಕೆ ತಾವು ಆರೈಕೆ ಮಾಡಿದ ತಮ್ಮ ಕರುಳ ಕುಡಿಯನ್ನೇ? ಹತರಾಗಬೇಕೆ ಯಾಜಕರೂ ಪ್ರವಾದಿಗಳೂ ಸ್ವಾಮಿಯ ಪವಿತ್ರಾಲಯದಲ್ಲೆ?
21 : ವಯಸ್ಕರೂ ವೃದ್ಧರೂ ಬಿದ್ದಿದ್ದಾರೆ ಬೀದಿಗಳಲ್ಲೆ ತರುಣತರುಣಿಯರು ತುತ್ತಾಗಿದ್ದಾರೆ ಖಡ್ಗಗಳಿಗೆ. ನಿನ್ನ ಪ್ರಕೋಪದ ದಿನದಂದು ಹತಮಾಡಿದೆಯಲ್ಲಾ ಅವರನ್ನು ಕನಿಕರಿಸದೆ !
22 : ಸುತ್ತಮುತ್ತಲೂ ದಿಗಿಲುಹುಟ್ಟಿಸುವ ನನ್ನ ಹಗೆಗಳನ್ನೆ ಕರೆಸಿದೆಯಲ್ಲಾ ಹಬ್ಬಕ್ಕೋ ಎಂಬಂತೆ ! ಸರ್ವೇಶ್ವರನ ಪ್ರಕೋಪದ ದಿನದಂದು ತಪ್ಪಿಸಿಕೊಳ್ಳಲಿಲ್ಲ ಯಾರೂ; ಉಳಿಯಲಿಲ್ಲ ಯಾರೂ. ಶತ್ರು ಸಂಹರಿಸಿಬಿಟ್ಟನಲ್ಲಾ ನಾನು ಸಾಕಿ ಆರೈಕೆ ಮಾಡಿದವರನ್ನೂ !

Holydivine