Lamentations - Chapter 4
Holy Bible

1 : ಅಕಟಕಟಾ! ಎಷ್ಟು ಮಸುಕಾಗಿದೆ ಬಂಗಾರ ಎಷ್ಟು ಕಾಂತಿಹೀನವಾಗಿಬಿಟ್ಟಿವೆ ಅಪ್ಪಟ ಚಿನ್ನ ! ಪವಿತ್ರಾಲಯದ ಕಲ್ಲುಗಳೂ ಬಿದ್ದಿವೆ ಚೆಲ್ಲಾಪಿಲ್ಲಿಯಾಗಿ ಬೀದಿಬೀದಿಗಳ ಬದಿಯಲ್ಲಿ ರಾಶಿರಾಶಿಯಾಗಿ !
2 : ಅಯ್ಯೋ, ಅಪರಂಜಿಯಂತೆ ಅಮೂಲ್ಯವಾಗಿದ್ದ ಸಿಯೋನ್ ಪ್ರಜೆ ಇಂದು ಬೇಡವೆಂದು ಬಿಸಾಡಿದ ಕುಂಬಾರನ ಮಣ್ಣುಮಡಕೆ ! ಅಮೂಲ್ಯವಾಗಿದ್ದರು ಸಿಯೋನಿನ ಪ್ರಜೆಗಳು ಅಪರಂಜಿಯಂತೆ ಅಯ್ಯೋ ಈಗ ಅವರಾಗಿಹರು ಕುಂಬಾರನೆ ಬಿಸಾಡಿದ ಮಡಕೆಯಂತೆ.
3 : ಮರಿಗಳಿಗೆ ಮೊಲೆಕೊಟ್ಟು ಹಾಲುಣಿಸುತ್ತವೆ ನರಿಗಳು ನನ್ನ ಜನರು ಆಗಿಹರು ಕಾಡಿನ ಉಷ್ಟ್ರಪಕ್ಷಿಯಂತೆ ಕ್ರೂರಿಗಳು.
4 : ದಾಹದಿಂದ ಸೇದುಹೋಗಿದೆ ಮೊಲೆಗೂಸಿನ ನಾಲಿಗೆ ಅನ್ನವಿಕ್ಕುವರಾರೂ ಇಲ್ಲ, ಹಂಬಲಿಸುವ ಆ ಹಸುಳೆಗಳಿಗೆ.
5 : ಮೃಷ್ಟಾನ್ನ ಉಣ್ಣುತ್ತಿದ್ದವರು ದಿಕ್ಕೆಟ್ಟು ಅಲೆಯುತ್ತಿರುವರು ಚಿಕ್ಕಂದಿನಿಂದಲೆ ನಾರುಮಡಿಯನ್ನು ತೊಡುತ್ತಿದ್ದವರು ತಿಪ್ಪೆಗಳನ್ನು ಅಪ್ಪಿಕೊಳ್ಳುವ ಗತಿಗೆ ಇಳಿದಿರುವರು.
6 : ‘ಸೊದೋಮ್’ ಊರು ಹಾಳಾಯಿತು ಕ್ಷಣಮಾತ್ರದಲ್ಲೆ ಅದರ ಮೇಲೆ ಯಾರೂ ಕೈಮಾಡದೆಯೇ. ಅದಕ್ಕಿಂತಲೂ ಹೆಚ್ಚಾಯಿತಲ್ಲಾ ನನ್ನ ಜನರ ಅಧರ್ಮ !
7 : ನನ್ನ ಜನತೆಯ ಮಹನೀಯರು ಹಿಮಕ್ಕಿಂತ ಶುಭ್ರ, ಹಾಲಿಗಿಂತ ಬಿಳುಪು. ಅವರ ದೇಹದ ಬಣ್ಣ ಹವಳವನ್ನು ಮೀರಿತ್ತು ಅವರ ರೂಪ ಇಂದ್ರನೀಲ ಮಣಿಯಂತೆ ಅಂದವಾಗಿತ್ತು.
8 : ಈಗ ಅವರ ಮುಖ ಕಾರ್ಮೋಡಕ್ಕಿಂತ ಕಪ್ಪು ಬೀದಿಗಳಲ್ಲಿ ನೋಡುತ್ತಿದ್ದವರಿಗೆ ಅವರ ಗುರುತೂ ಸಿಗದು. ಅವರ ಚರ್ಮ ಎಲುಬುಗಳಿಗೆ ಅಂಟಿಕೊಂಡಿದೆ ಅದಕ್ಕೆ ಸುಕ್ಕು ಹಿಡಿದಿದೆ; ಒಣಗಿ ಕಟ್ಟಿಗೆಯಾಗಿದೆ.
9 : ಹಸಿವೆಯಿಂದ ಹತರಾದವರಿಗಿಂತ ಖಡ್ಗದಿಂದ ಹತರಾದವರು ಲೇಸು. ತುತ್ತಾದರು ಅವರು ಕ್ಷಾಮಕ್ಕೆ ಕ್ಷಯಿಸಿಹೋದರು ನೆಲದ ಗೆಡ್ಡೆ ಗೆಣಸೂ ಸಿಗದೆ.
10 : ಕರುಣಾಮಯಿಗಳಾದ ಹೆಂಗಳೆಯರು ತಮ್ಮ ಕಂದಮ್ಮಗಳನ್ನು ಸ್ವಂತ ಕೈಯಿಂದ ಬೇಯಿಸಿದರು. ನನ್ನ ಜನರ ಪರಿವಿನಾಶದ ಕಾಲದೊಳು ತಮ್ಮ ತಾಯಿಗಳಿಗೆ ತಿಂಡಿಯಾದರು ಆ ಹಸುಳೆಗಳು.
11 : ಸುರಿಸಿದ್ದಾನೆ ಸರ್ವೇಶ್ವರ ತನ್ನ ರೋಷಾಗ್ನಿಯನ್ನು ತೀರಿಸಿಕೊಂಡಿದ್ದಾನೆ ತನ್ನ ಉಗ್ರಕೋಪವನ್ನು. ಆತ ಹೊತ್ತಿಸಿದ ಬೆಂಕಿಗೆ ಸಿಯೋನಿನ ಅಸ್ತಿವಾರ ಆಹುತಿಯಾಗಿದೆ.
12 : ವೈರಿಗಳೂ ವಿರೋಧಿಗಳೂ ಜೆರುಸಲೇಮಿನ ಬಾಗಿಲೊಳಗೆ ಕಾಲಿಡುವರೆಂದು ವಿಶ್ವದ ರಾಜರಾಗಲಿ, ನಿವಾಸಿಗಳಾಗಲಿ ನಂಬಿರಲಿಲ್ಲ ಯಾರೂ.
13 : ನಗರದ ನಡುವೆಯೇ ಆದ ನೀತಿವಂತರ ರಕ್ತಪಾತದಿಂದ ಯಾಜಕರು, ಪ್ರವಾದಿಗಳು ಎಸಗಿದ ಈ ಪಾಪದೋಷಗಳಿಂದ ಬಂದೊದಗಿತು ಈ ಪರಿತಾಪವೆಲ್ಲ.
14 : ಕುರುಡರಂತೆ ಬೀದಿಗಳಲ್ಲಿ ಅಲೆಯುತ್ತಿಹರು ಆ ಯಾಜಕರು ಮತ್ತು ಪ್ರವಾದಿಗಳು. ಅವರ ಬಟ್ಟೆಯನ್ನೂ ಯಾರೂ ಮುಟ್ಟರು ಏಕೆಂದರೆ ರಕ್ತದಿಂದ ಅವರು ಕಳಂಕಿತರಾಗಿಹರು.
15 : ಅವರನ್ನು ನೋಡುವವರೂ “ತೊಲಗಿರಿ, ನೀವು ಅಶುದ್ಧರು ನಡೆಯಿರಿ, ನಡೆಯಿರಿ, ಮುಟ್ಟಬೇಡಿ” ಎಂದು ಕೂಗುತ್ತಿರುವರು. ಅವರು ಓಡಿ ಅನ್ಯನಾಡುಗಳಲ್ಲಿ ಅಲೆಯುತ್ತಿರಲು “ಇವರು ಇನ್ನು ಇಲ್ಲಿ ತಂಗಕೂಡದು” ಎನ್ನುತಿಹರು ಅಲ್ಲಿನ ನಾಡಿಗರು.
16 : ಸರ್ವೇಶ್ವರನ ದೃಷ್ಟಿ ಅವರನ್ನು ಚದರಿಸಿದೆ ಇನ್ನು ಆತ ತೋರನು ಅವರಿಗೆ ಕರುಣೆ. ಯಾಜಕರಾದರೂ ಅವರಿಗೆ ಮರ್ಯಾದೆ ತಪ್ಪಿಹೋಗಿದೆ ಹಿರಿಯರಾದರೂ ಅವರಿಗೆ ಆದರಣೆ ಇಲ್ಲದಿದೆ.
17 : ಮಬ್ಬಾಯಿತು ಕಣ್ಣು ವ್ಯರ್ಥವಾಗಿ ನೆರವನ್ನು ನಿರೀಕ್ಷಿಸುತ ರಕ್ಷಿಸಲಾಗದ ರಾಷ್ಟ್ರಕ್ಕಾಗಿ ಕೋವರದಲ್ಲಿ ಕಾದು ನೋಡುತ.
18 : ಶತ್ರು ನಮ್ಮನ್ನು ಹೆಜ್ಜೆಹೆಜ್ಜೆಗೂ ಹುಡುಕುತ್ತಿದ್ದುದರಿಂದ ಹಾದಿಬೀದಿಗಳಲ್ಲಿ ಸಂಚಾರಮಾಡಲೂ ಆಗುತ್ತಿರಲಿಲ್ಲ. ನಮಗೆ ಕಾಲವು ತೀರಿತು, ಅಂತ್ಯವು ಸಮೀಪಿಸಿತು; ಹೌದು, ನಮ್ಮ ಅಂತ್ಯವು ಬಂದೇ ಬಿಟ್ಟಿತು !
19 : ಹದ್ದುಗಳ ವೇಗದಿಂದ ಹಿಂದಟ್ಟಿಬಂದರು ನಮ್ಮನ್ನು ಬೆನ್ನಟ್ಟಿ ಬೆಟ್ಟಗಳನ್ನೇರಿದರು ಅರಣ್ಯಗಳಲ್ಲಿ ನಮಗಾಗಿ ಹೊಂಚುಹಾಕಿದರು.
20 : ಯಾವನನ್ನು ಕುರಿತು ನಾವು: “ನಮ್ಮ ಬಾಳಿನ ಉಸಿರು, ದೇವರಿಂದ ಅಭಿಷಿಕ್ತನು, ಇವನ ಆಶ್ರಯದಿಂದಲೆ ರಾಷ್ಟ್ರಗಳ ನಡುವೆ ನಮಗೆ ಉಳಿವು” ಎಂದುಕೊಂಡೆವೋ ಅಂಥವನೇ ಸಿಕ್ಕಿಬಿದ್ದಿದ್ದಾನೆ ಹಗೆಗಳು ತೋಡಿದ ಗುಳಿಯೊಳಗೆ !
21 : ‘ಊಚ’ ಮತ್ತು ‘ಎದೋಮ್’ ನಾರೀಮಣಿಗಳೇ, ಸಂತೋಷಿಸಿ ಉಲ್ಲಾಸಿಸುತ್ತಿರುವಿರಿ ಅಲ್ಲವೇ? ಆದರೆ ಖಂಡಿತ ಬರುವುದು ಕಹಿಪಾನದ ಪಾತ್ರೆ ನಿಮ್ಮ ಪಾಲಿಗೆ ಅಮಲೇರಿ ಬೆತ್ತಲೆಯಾಗುವ ಗತಿ ಬಂದೇಬರುವುದು ನಿಮಗೆ !
22 : ‘ಸಿಯೋನ್’ ನಾರಿಮಣಿಯೇ, ನಿನ್ನ ದೋಷದ ಫಲವನ್ನು ಅನುಭವಿಸಿ ಆಗಿದೆ. ಸರ್ವೇಶ್ವರನು ಮತ್ತೆ ಒಯ್ಯನು ನಿನ್ನನ್ನು ಸೆರೆಗೆ. ‘ಎದೋಮ್’ ನಾರಿಮಣಿಯೇ, ನಿನ್ನ ದೋಷದ ನಿಮಿತ್ತ ಸರ್ವೇಶ್ವರನು ನಿನ್ನನ್ನು ದಂಡಿಸುವನು ನಿನ್ನ ಪಾಪಾಕ್ರಮಗಳನ್ನು ಬಯಲಿಗೆ ಎಳೆಯುವನು.

Holydivine