Baruch - Chapter 5
Holy Bible

1 : ಜೆರುಸಲೇಮೇ, ಕಳಚಿಬಿಡು ನಿನ್ನ ಶೋಕಾರ್ಥ ವಸ್ತ್ರಗಳನ್ನು ಧರಿಸಿಕೋ ನಿತ್ಯಕ್ಕೆಂದು ದೇವರಿಂದ ಬರುವ ಪ್ರಭಾವದ ಸೊಬಗನ್ನು.
2 : ತೊಟ್ಟುಕೋ ದೇವರಿಂದ ಬರುವ ನೀತಿಯೆಂಬ ನಿಲುವಂಗಿಯನ್ನು ಇಟ್ಟುಕೋ ತಲೆಯ ಮೇಲೆ ಮಹಿಮೆಯೆಂಬ ಮುಕುಟವನ್ನು.
3 : ದೇವರೇ ನಿನ್ನ ತೇಜಸ್ಸನ್ನು ಹರಡುವರು ಆಕಾಶದಡಿಯಿರುವ ಎಲ್ಲ ದಿಕ್ಕುಗಳಿಗು.
4 : ‘ನೀತಿಯಿಂದ ಶಾಂತಿ’, ‘ಭಕ್ತಿಯಿಂದ ಕೀರ್ತಿ’ ಎಂದು ದೇವರೇ ನಿನ್ನನ್ನು ಹೆಸರಿಸುವರು ಎಂದೆಂದಿಗು.
5 : ಜೆರುಸಲೇಮೇ, ಎದ್ದೇಳು, ಉನ್ನತಸ್ಥಾನದಲ್ಲಿ ನಿಲ್ಲು ಪೂರ್ವಾಭಿಮುಖವಾಗಿ ತಿರುಗಿಸು ನಿನ್ನ ಕಣ್ಣುಗಳನ್ನು. ದೇವರು ತಮ್ಮನ್ನು ನೆನೆಸಿಕೊಂಡರೆಂದು ಹಿಗ್ಗುತಿಹರು ನಿನ್ನ ಮಕ್ಕಳು ಪರಮಪಾವನನ ನುಡಿಯಂತೆ ಪೂರ್ವ ಪಶ್ಚಿಮ ದಿಂದ ಕೂಡಿಬರುತಿಹರು ನೋಡು.
6 : ಶತ್ರುಗಳಿಂದ ಒಯ್ಯಲ್ಪಟ್ಟು ಕಾಲ್ನಡೆಯಲ್ಲಿ ಅವರು ನಿನ್ನ ಬಿಟ್ಟುಹೋದರು. ಈಗ ವೈಭವದಿಂದ ಹೊರಟು, ಸಿಂಹಾಸನಾರೂಢರಾದವರಂತೆ ಬರುತ್ತಿಹರು ದೇವರೇ ಅವರನ್ನು ನಿನ್ನ ಬಳಿಗೆ ಬರಮಾಡುತ್ತಿಹರು.
7 : ಇಸ್ರಯೇಲ್ ದೈವಪ್ರಭೆಯಲಿ ಸುರಕ್ಷಿತವಾಗಿ ಸಾಗಬೇಕೆಂದು ಅದಕ್ಕಾಗಿ ಉನ್ನತಬೆಟ್ಟಗಳು, ನೆಲೆಯಾದ ಗುಡ್ಡಗಳು ತಗ್ಗಬೇಕೆಂದು ಹಳ್ಳಕೊಳ್ಳಗಳು ತುಂಬಿ ಭರ್ತಿಯಾಗಿ ನೆಲಸಮವಾಗಬೇಕೆಂದು ದೇವರೇ ನೇಮಕಮಾಡಿರುವರು.
8 : ಆ ದೇವರ ಅಪ್ಪಣೆಯ ಪ್ರಕಾರ ಇಸ್ರಯೇಲಿಗೆ ನೆರಳು ನೀಡುವುವು ಕಾಡುಗಳು, ಸುಗಂಧವಾಸನೆಯನ್ನು ಬೀರುವುವು ಗಿಡಮರಗಳು.
9 : ದೇವರು ಇಸ್ರಯೇಲನ್ನು ನಡೆಸುವರು ತಮ್ಮ ಮಹಿಮೆ ಪ್ರಕಾಶದಲ್ಲೆ ಹರುಷದೊಡನೆ ತಮ್ಮಿಂದ ಬರುವ ಕರುಣೆ ಹಾಗು ನ್ಯಾಯನೀತಿಗಳೊಡನೆ.

Holydivine