Amos - Chapter 6
Holy Bible

1 : ಇಸ್ರಯೇಲಿನ ಜನರು ನಿಮ್ಮ ಸಹಾಯಕೋರಿ ನಿಮ್ಮನ್ನು ಹುಡುಕಿಕೊಂಡು ಬರುವಷ್ಟು ಪ್ರತಿಭಾವಂತರಾಗಿರುವವರೇ, ನಿಮಗೆ ಧಿಕ್ಕಾರ!
2 : ಕಲ್ನೆ ಪಟ್ಟಣಕ್ಕೆ ಹೋಗಿ ನೋಡಿ. ಅಲ್ಲಿಂದ ಪ್ರಖ್ಯಾತ ಪಟ್ಟಣವಾದ ಹಮಾತಿಗೆ ನಡೆಯಿರಿ. ಹಮಾತಿನಿಂದ ಫಿಲಿಷ್ಟಿಯರ ಊರಾದ ಗಾತ್ ನಗರಕ್ಕೆ ಇಳಿದುಹೋಗಿರಿ. ಅವು ನಿಮ್ಮ ರಾಜ್ಯಗಳಿಗಿಂತ ದೊಡ್ಡವೋ? ಅವುಗಳ ಪ್ರಾಂತ್ಯ ನಿಮ್ಮ ಪ್ರಾಂತ್ಯಕ್ಕಿಂತ ಹಿರಿದೋ?
3 : ಆ ದುರ್ದಿನದಿಂದ ತಪ್ಪಿಸಿಕೊಳ್ಳಲು ಯತ್ನಿಸುವ ಮುಖಂಡರೇ, ಮತ್ತಷ್ಟು ಶೀಘ್ರವಾಗಿ ಹಿಂಸಾಕ್ರಮಣವನ್ನು ಬರಮಾಡಿಕೊಳ್ಳುತ್ತೀರಿ.
4 : ದಂತದ ಮಂಚಗಳ ಮೇಲೆ ಮಲಗುವ ಜನರೇ, ನಿಮಗೆ ಧಿಕ್ಕಾರ! ಸುಖಾಸನಗಳಲ್ಲೂ ಸುಪ್ಪತ್ತಿಗೆಯ ಮೇಲೂ ಹಾಯಾಗಿ ಒರಗಿಕೊಂಡಿರುವವರೇ, ನಿಮಗೆ ಧಿಕ್ಕಾರ! ಮಂದೆಯ ಕುರಿಮರಿಗಳನ್ನು, ಕೊಟ್ಟಿಗೆಯ ಕರುಗಳನ್ನು ಕೊಂದು ತಿನ್ನುವವರೇ, ನಿಮಗೆ ಧಿಕ್ಕಾರ!
5 : ವೀಣೆಯನ್ನು ನುಡಿಸುತ್ತಾ ಮನಸ್ಸು ಬಂದಂತೆ ಹಾಡುವವರೇ, ದಾವೀದನಂತೆ ಹೊಸ ವಾದ್ಯಸಂಗೀತಗಳನ್ನು ರಚಿಸುವವರೇ, ನಿಮಗೆ ಧಿಕ್ಕಾರ!
6 : ಬೋಗುಣಿಬಟ್ಟಲುಗಳಲ್ಲಿ ದ್ರಾಕ್ಷಾರಸವನ್ನು ಕುಡಿಯುವವರೇ, ಅತ್ಯುತ್ತಮ ಸುಗಂಧ ತೈಲಗಳನ್ನು ಲೇಪಿಸಿಕೊಳ್ಳುವವರೇ, ನಿಮಗೆ ಧಿಕ್ಕಾರ! ಏಕೆಂದರೆ ನೀವು ಜೋಸೆಫನ ವಂಶದವರ ವಿನಾಶದ ಬಗ್ಗೆ ನಿಶ್ಚಿಂತರಾಗಿದ್ದೀರಿ.
7 : ಆದುದರಿಂದ ಗಡೀಪಾರಾಗುವವರಲ್ಲಿ ನೀವೇ ಮೊದಲಿಗರಾಗುವಿರಿ. ಆಗ ನಿಮ್ಮ ಸುಖಾಸನಗಳು ಮತ್ತು ಆಮೋದ ಪ್ರಮೋದಗಳು ಗತಿಸಿ ಹೋಗುವುವು.
8 : ಸೇನಾಧೀಶ್ವರ ದೇವರಾದ ಸರ್ವೇಶ್ವರಸ್ವಾಮಿ ಪ್ರಮಾಣಮಾಡಿ ಹೇಳಿದ್ದೇನೆಂದರೆ: “ಯಕೋಬ ವಂಶದವರ ಉದ್ಧಟತನವನ್ನು ದ್ವೇಷಿಸುತ್ತೇನೆ. ಅವರ ಮೋಜಿನ ಮಹಲುಗಳನ್ನು ತೃಣೀಕರಿಸುತ್ತೇನೆ. ಅವರ ರಾಜಧಾನಿಯನ್ನೂ ಅದರಲ್ಲಿರುವುದೆಲ್ಲವನ್ನೂ ಶತ್ರುವಶಕ್ಕೆ ಒಪ್ಪಿಸುತ್ತೇನೆ.”
9 : ಮನೆಯೊಂದರಲ್ಲಿ ಹತ್ತು ಮಂದಿ ಉಳಿದಿದ್ದರೂ ಅವರೆಲ್ಲರೂ ಸಾಯುವರು.
10 : ಶವವನ್ನು ಸುಡಲು ಬಂದ ಸಂಬಂಧಿಕರು ಹೆಣವನ್ನು ಮನೆಯೊಳಗಿಂದ ತೆಗೆದುಕೊಂಡು ಹೋದಾಗ, “ನಿಮ್ಮಲ್ಲಿ ಯಾರಾದರೂ ಉಳಿದಿದ್ದಾರೋ?” ಎಂದು ಒಳಮನೆಯಲ್ಲಿ ಇರುವವನನ್ನು ಕೇಳಿದರೆ, ಅವನು “ಇಲ್ಲ” ಎನ್ನುವನು. ಆಗ ಆ ಸಂಬಂಧಿಕನು, “ಮೌನದಿಂದಿರು! ಸರ್ವೇಶ್ವರಸ್ವಾಮಿಯ ಹೆಸರನ್ನೂ ಎತ್ತಕೂಡದು” ಎಂದು ಎಚ್ಚರಿಸುವನು.
11 : ಇಗೋ, ಸರ್ವೇಶ್ವರ ಆಜ್ಞಾಪಿಸಲು, ಕುಸಿದು ಬೀಳುವುವು ಮಹಾಸೌಧಗಳು, ನುಚ್ಚು ನೂರಾಗುವುವು ಚಿಕ್ಕ ಚಿಕ್ಕ ಮನೆಗಳು.
12 : ಕಲ್ಲು ಬಂಡೆಗಳ ಮೇಲೆ ಕುದುರೆಗಳು ಓಡಾಡುವುದುಂಟೋ? ಎತ್ತು ಹೋರಿಗಳಿಂದ ಕಡಲನ್ನು ಉಳುವುದುಂಟೋ? ನೀವೋ, ವಿಷವನ್ನಾಗಿಸಿದ್ದೀರಿ ನ್ಯಾಯನೀತಿಯನ್ನು, ಕಹಿಯಾಗಿಸಿದ್ದೀರಿ ಧರ್ಮದ ಸತ್ಪಲವನ್ನು.
13 : ನೀವು ಹೆಚ್ಚಳಪಡುವುದು ‘ಲೊದೆ ಬಾರಿನ’ ಗೆಲುವಿನಲ್ಲಿ! ಸ್ವಬಲದಿಂದಲೇ ಕರ್ನಾಯಿಮನ್ನು ಜಯಿಸಿದ್ದೇವೆಂದು ಕೊಚ್ಚಿಕೊಳ್ಳುವುದರಲ್ಲಿ!
14 : ಇಂತೆನ್ನುತ್ತಾರೆ ಸೇನಾಧೀಶ್ವರ ಸರ್ವೇಶ್ವರ: “ಎತ್ತಿಕಟ್ಟುವೆನು ನಿಮಗೆ ವಿರುದ್ಧವಾಗಿ ಜನಾಂಗವೊಂದನ್ನು; ಸದೆಬಡಿವುದದು ನಿಮ್ಮನ್ನು ಹಮಾತಿನ ದಾರಿಯಿಂದ ಅರಬಾ ತೊರೆಯ ತನಕ.”

Holydivine