Amos - Chapter 3
Holy Bible

1 : ಇಸ್ರಯೇಲಿನ ಜನರೇ, ಕಿವಿಗೊಡಿ. ಈಜಿಪ್ಟ್ ದೇಶದಿಂದ ನಿಮ್ಮನ್ನು ಬಿಡುಗಡೆ ಮಾಡಿ ಕರೆತಂದ ಸರ್ವೇಶ್ವರ ನಿಮ್ಮ ವಿರುದ್ಧವಾಗಿ ನುಡಿಯುವ ಮಾತುಗಳನ್ನು ಆಲಿಸಿರಿ:
2 : “ಜಗದ ಜನಾಂಗಗಳಲ್ಲಿ ನನಗೆ ಆಪ್ತರಾದವರೆಂದರೆ ನೀವು. ಆದಕಾರಣ ನೀವು ಮಾಡಿರುವ ಎಲ್ಲಾ ಪಾಪಗಳಿಗೆ ತಕ್ಕ ಪ್ರಾಯಶ್ಚಿತ್ತವನ್ನು ಸವಿಯುವಂತೆ ಮಾಡುವೆನು.”
3 : ಗೊತ್ತುಗುರಿಯಿಲ್ಲದೆ ಯಾರಾದರಿಬ್ಬರು ಜೊತೆಯಾಗಿ ಪ್ರಯಾಣ ಮಾಡುವುದುಂಟೆ?
4 : ಬೇಟೆ ಕಂಡಾಗಲ್ಲದೆ ಸಿಂಹವು ಕಾಡಿನಲ್ಲಿ ಗರ್ಜಿಸುವುದುಂಟೆ? ಏನನ್ನೂ ಹಿಡಿಯದೆ ಯುವಸಿಂಹವು ಗುಹೆಯಲ್ಲೆ ಗುರುಗುಟ್ಟುವುದುಂಟೆ?
5 : ಕಾಳಿಲ್ಲದೆ ಪಕ್ಷಿ ಬಲೆಗೆ ಬೀಳುವುದುಂಟೆ? ಏನೂ ಸಿಕ್ಕಿಕೊಳ್ಳದೆ ಬೋನು ಮೇಲಕ್ಕೆ ಏರುವುದುಂಟೆ?
6 : ರಣಕಹಳೆ ಮೊಳಗಲು ಜನರು ಬೆದರದೆ ಇರುವುದುಂಟೆ? ಸರ್ವೇಶ್ವರನಿಂದಲ್ಲದೆ ಪಟ್ಟಣಕ್ಕೆ ಕೇಡು ತಟ್ಟುವುದುಂಟೆ?
7 : ತನ್ನ ಪರಿಚಾರಕರಾದ ಪ್ರವಾದಿಗಳಿಗೆ ತನ್ನ ಯೋಜನೆಯನ್ನು ತಿಳಿಸದೆ ಸ್ವಾಮಿ ಸರ್ವೇಶ್ವರ ಏನೂ ಮಾಡುವುದಿಲ್ಲ.
8 : ಸಿಂಹದ ಗರ್ಜನೆಯನ್ನು ಕೇಳಿ ಹೆದರದಿರುವವರು ಯಾರು? ಸ್ವಾಮಿ ಸರ್ವೇಶ್ವರನ ನುಡಿಯನ್ನು ಕೇಳಿ ಪ್ರವಾದನೆ ಮಾಡದಿರುವವರು ಯಾರು?”
9 : ಅಷ್ಡೋದಿನ ಅರಮನೆಗಳಲ್ಲೂ ಈಜಿಪ್ಟಿನ ಸೌಧಗಳಲ್ಲೂ ಹೀಗೆಂದು ಪ್ರಕಟಿಸಿರಿ; “ಸಮಾರ್ಯದ ಬೆಟ್ಟಗುಡ್ಡಗಳಿಗೆ ಕೂಡಿಬನ್ನಿ. ಪಟ್ಟಣದಲ್ಲಿ ಎಷ್ಟೊಂದು ಗಲಭೆಗೊಂದಲ, ಎಷ್ಟೊಂದು ಹಿಂಸಾಚಾರ ನಡೆಯುತ್ತಿದೆ, ನೋಡಿ.
10 : “ಹಿಂಸಾಚಾರದಿಂದ ಹಾಗು ಸುಲಿಗೆಯಿಂದ ಗಳಿಸಿದ್ದನ್ನು ಜನರು ತಮ್ಮ ಮಳಿಗೆಗಳಲ್ಲಿ ತುಂಬಿಸಿಕೊಂಡಿದ್ದಾರೆ. ಅಂಥ ಜನರಿಗೆ ನ್ಯಾಯ ನೀತಿ ತಿಳಿಯದು,” ಎಂದು ಸರ್ವೇಶ್ವರ ಹೇಳುತ್ತಾರೆ.
11 : ಇಂತಿರಲು ಸ್ವಾಮಿ ಸರ್ವೇಶ್ವರ ಹೇಳುವುದೇನೆಂದರೆ: “ಶತ್ರುಗಳು ನಿಮ್ಮ ನಾಡಿಗೆ ಮುತ್ತಿಗೆ ಹಾಕುವರು. ನಿಮ್ಮ ಕೋಟೆ ಕೊತ್ತಲಗಳನ್ನು ನೆಲಸಮ ಮಾಡುವರು. ನಿಮ್ಮ ಸೌಧಗಳನ್ನು ಸೂರೆಮಾಡುವರು.”
12 : ಸೇನಾಧೀಶ್ವರ ಸರ್ವೇಶ್ವರ ಇಂತೆನ್ನುತ್ತಾರೆ: “ಸಿಂಹದ ಬಾಯಿಗೆ ಸಿಕ್ಕಿದ ಕುರಿಯ ಅಂಗಗಳಲ್ಲಿ ಕಿವಿಕಾಲು ಮಾತ್ರ ಕುರುಬನಿಗೆ ದಕ್ಕೀತು. ಅಂತೆಯೇ ಸಮಾರ್ಯದ ಸುಖಾಸನಗಳಲ್ಲೂ ಸುಪ್ಪತ್ತಿಗೆ ಮೇಲೂ ಹಾಯಾಗಿ ಒರಗಿಕೊಂಡಿರುವ ಇಸ್ರಯೇಲರಲ್ಲಿ ಕೆಲವೇ ಕೆಲವರು ಮಾತ್ರ ಉಳಿಯುವರು.
13 : ಈಗ ಕೇಳಿ, ಯಕೋಬನ ವಂಶದವರಿಗೆ ಎಚ್ಚರಿಕೆ ನೀಡಿ:
14 : ಇಸ್ರಯೇಲರ ಪಾಪಕೃತ್ಯಗಳಿಗಾಗಿ ಅವರನ್ನು ದಂಡಿಸುವೆನು, ಬೇತೇಲಿನ ಯಜ್ಞವೇದಿಗಳನ್ನು ಚೂರುಚೂರು ಮಾಡುವೆನು. ಆ ಯಜ್ಞವೇದಿಯ ಮೂಲೆಕೊಂಬುಗಳನ್ನು ಕತ್ತರಿಸಿ ಬೀದಿಪಾಲಾಗಿಸುವೆನು.
15 : ಚಳಿಗಾಲ, ಬೇಸಿಗೆಕಾಲಗಳ ವಿಹಾರ ಗೃಹಗಳನ್ನು ವಿನಾಶಮಾಡುವೆನು. ದಂತನಿರ್ಮಿತ ಮಂದಿರಗಳು ಧ್ವಂಸವಾಗುವುವು. ಮಹಾಸೌಧಗಳು ನೆಲಸಮವಾಗುವುವು. ಸರ್ವೇಶ್ವರ ಸ್ವಾಮಿಯ ನುಡಿಯಿದು.”

Holydivine