Mark - Chapter 2
Holy Bible

1 : ಕೆಲವು ದಿನಗಳು ಕಳೆದ ಬಳಿಕ ಯೇಸುಸ್ವಾಮಿ ಮತ್ತೊಮ್ಮೆ ಕಫೆರ್ನವುಮಿಗೆ ಬಂದರು. ಅವರು ಮನೆಯಲ್ಲಿದ್ದಾರೆಂಬ ಸುದ್ದಿ ಹಬ್ಬಿತು....
2 : ಜನರು ಗುಂಪುಗುಂಪಾಗಿ ಅಲ್ಲಿಗೆ ಬಂದರು. ಇದರಿಂದಾಗಿ ಮನೆಯೊಳಗೆ ಮಾತ್ರವಲ್ಲ, ಹೊರಗಡೆಯೂ ಸ್ಥಳ ಸಾಲದೆ ಹೋಯಿತು. ಯೇಸು ಅಲ್ಲಿ ಸೇರಿದ್ದ ಜನಸ್ತೋಮಕ್ಕೆ ದೇವರ ವಾಕ್ಯವನ್ನು ಬೋಧಿಸತೊಡಗಿದರು.
3 : ಆಗ ಒಬ್ಬ ಪಾಶ್ರ್ವವಾಯು ರೋಗಿಯನ್ನು ನಾಲ್ವರಿಂದ ಹೊರಿಸಿಕೊಂಡು ಕೆಲವರು ಅಲ್ಲಿಗೆ ಬಂದರು.
4 : ಜನಸಂದಣಿಯ ನಿಮಿತ್ತ ಅವನನ್ನು ಯೇಸುವಿನ ಸಮೀಪಕ್ಕೆ ಸಾಗಿಸಲು ಸಾಧ್ಯವಾಗಲಿಲ್ಲ. ಆದುದರಿಂದ ಅವರು ಯೇಸು ಇದ್ದ ಮನೆಯ ಮೇಲ್ಛಾವಣಿಯನ್ನು ತೆರೆದು, ದೊಡ್ಡ ಕಿಂಡಿಯೊಂದನ್ನು ಮಾಡಿ, ರೋಗಿಯನ್ನು ಹಾಸಿಗೆಯ ಸಮೇತ ಕೆಳಗಿಳಿಸಿದರು.
5 : ಯೇಸು ಅವರ ವಿಶ್ವಾಸವನ್ನು ಮೆಚ್ಚಿ ಆ ಪಾಶ್ರ್ವವಾಯು ರೋಗಿಗೆ, “ಮಗು, ನಿನ್ನ ಪಾಪಗಳನ್ನು ಕ್ಷಮಿಸಲಾಗಿದೆ,” ಎಂದರು.
6 : ಆಗ, ಅಲ್ಲೇ ಕುಳಿತಿದ್ದ ಧರ್ಮಶಾಸ್ತ್ರಿಗಳಲ್ಲಿ ಕೆಲವರು, “ಇವನೇಕೆ ಹೀಗೆ ಮಾತನಾಡುತ್ತಾನೆ? ಇದು ದೇವದೂಷಣೆ!
7 : ದೇವರೊಬ್ಬರ ಹೊರತು ಪಾಪಗಳನ್ನು ಕ್ಷಮಿಸಲು ಬೇರೆ ಯಾರಿಂದ ಸಾಧ್ಯ?” ಎಂದು ತಮ್ಮ ಮನಸ್ಸಿನಲ್ಲೇ ಆಲೋಚಿಸಿಕೊಳ್ಳುತ್ತಿದ್ದರು.
8 : ಅವರು ಹೀಗೆ ಯೋಚಿಸುತ್ತಿರುವುದನ್ನು ಯೇಸು ತಕ್ಷಣ ಗ್ರಹಿಸಿಕೊಂಡು ಅವರಿಗೆ, “ನೀವು ನಿಮ್ಮ ಮನಸ್ಸಿನಲ್ಲಿ ಹೀಗೆ ಆಲೋಚಿಸುತ್ತಿರುವುದು ಏಕೆ?
9 : ಈ ಪಾಶ್ರ್ವವಾಯು ರೋಗಿಗೆ, ‘ನಿನ್ನ ಪಾಪಗಳನ್ನು ಕ್ಷಮಿಸಲಾಗಿದೆ,’ ಎಂದು ಹೇಳುವುದು ಸುಲಭವೋ ಅಥವಾ ‘ಎದ್ದು ನಿನ್ನ ಹಾಸಿಗೆಯನ್ನು ಎತ್ತಿಕೊಂಡು ನಡೆ’ ಎನ್ನುವುದು ಸುಲಭವೋ?
10 : ಭೂಲೋಕದಲ್ಲಿ ಪಾಪಗಳನ್ನು ಕ್ಷಮಿಸಲು ನರಪುತ್ರನಿಗೆ ಅಧಿಕಾರವುಂಟೆಂದು ಈ ಮೂಲಕ ನಿಮಗೆ ಖಚಿತವಾಗಬೇಕು,” ಎಂದು ಹೇಳಿ, ಆ ಪಾಶ್ರ್ವವಾಯು ರೋಗಿಯನ್ನು ನೋಡಿ,
11 : “ನಾನು ನಿನಗೆ ಆಜ್ಞಾಪಿಸುತ್ತೇನೆ; ಏಳು, ನಿನ್ನ ಹಾಸಿಗೆಯನ್ನು ಎತ್ತಿಕೊಂಡು ಮನೆಗೆ ಹೋಗು,” ಎಂದರು.
12 : ಎಲ್ಲರೂ ನೋಡುತ್ತಿದ್ದ ಹಾಗೆ ಅವನು ಎದ್ದುನಿಂತನು; ತನ್ನ ಹಾಸಿಗೆಯನ್ನು ತಾನೇ ಎತ್ತಿಕೊಂಡು ಹೊರಟುಹೋದನು. ನೆರೆದಿದ್ದ ಎಲ್ಲರೂ ಆಶ್ಚರ್ಯಚಕಿತರಾಗಿ, “ಇಂಥ ಕಾರ್ಯವನ್ನು ನಾವು ನೋಡಿದ್ದೇ ಇಲ್ಲ!”, ಎಂದು ದೇವರನ್ನು ಕೊಂಡಾಡಿದರು. ಸುಂಕದ ಇಲಾಖೆಯಿಂದ ಶಿಷ್ಯನ ಆಯ್ಕೆ (ಮತ್ತಾ. 9.9-13; ಲೂಕ 5.27-32)
13 : ಯೇಸುಸ್ವಾಮಿ ಪುನಃ ಗಲಿಲೇಯ ಸರೋವರದ ತೀರಕ್ಕೆ ಹೋದರು. ಜನರ ಗುಂಪು ಅವರನ್ನು ಸುತ್ತುಗಟ್ಟಿತು. ಯೇಸು ಅವರಿಗೆ ಪ್ರಬೋಧಿಸಿದರು.
14 : ಅಲ್ಲಿಂದ ಹೊರಟುಹೋಗುತ್ತಿರುವಾಗ, ಅಲ್ಫಾಯನ ಮಗನಾದ ಲೇವಿಯು ಸುಂಕ ವಸೂಲಿಗಾಗಿ ಉಕ್ಕಡದಲ್ಲಿ ಕುಳಿತಿರುವುದನ್ನು ಯೇಸು ಕಂಡರು. “ನನ್ನನ್ನು ಹಿಂಬಾಲಿಸು,” ಎಂದು ಹೇಳಿ ಕರೆದರು. ಲೇವಿ ಎದ್ದು ಅವರನ್ನು ಹಿಂಬಾಲಿಸಿದನು.
15 : ತದನಂತರ ಯೇಸು ಲೇವಿಯ ಮನೆಯಲ್ಲಿ ಊಟಕ್ಕೆ ಕುಳಿತಿದ್ದರು. ಬಹುಮಂದಿ ಸುಂಕದವರು, ಪಾಪಿಷ್ಠರು, ಅಲ್ಲಿಗೆ ಬಂದರು. ಇವರೆಲ್ಲರೂ ಯೇಸು ಮತ್ತು ಅವರ ಶಿಷ್ಯರ ಪಂಕ್ತಿಯಲ್ಲೇ ಊಟಕ್ಕೆ ಕುಳಿತರು. ಇಂಥವರು ಬಹುಮಂದಿ ಯೇಸುವನ್ನು ಹಿಂಬಾಲಿಸುತ್ತಿದ್ದರು.
16 : ಫರಿಸಾಯ ಪಂಥಕ್ಕೆ ಸೇರಿದ್ದ ಧರ್ಮಶಾಸ್ತ್ರಿಗಳಲ್ಲಿ ಕೆಲವರು, ಸುಂಕದವರ ಮತ್ತು ಇತರ ಪಾಪಿಗಳ ಪಂಕ್ತಿಯಲ್ಲಿ ಯೇಸು ಊಟ ಮಾಡುವುದನ್ನು ಕಂಡು, “ಈತನು ಇಂಥಾ ಬಹಿಷ್ಕøತ ಜನರ ಜೊತೆಯಲ್ಲಿ ಊಟ ಮಾಡುವುದೇಕೆ?” ಎಂದು ಯೇಸುವಿನ ಶಿಷ್ಯರೊಡನೆ ಆಕ್ಷೇಪಿಸಿದರು.
17 : ಇದನ್ನು ಕೇಳಿಸಿಕೊಂಡ ಯೇಸು ಅವರಿಗೆ, “ವೈದ್ಯನ ಅವಶ್ಯಕತೆ ಇರುವುದು ರೋಗಿಗಳಿಗೆ, ಆರೋಗ್ಯವಂತರಿಗಲ್ಲ; ನಾನು ಕರೆಯಲು ಬಂದಿರುವುದು ಧರ್ಮಿಷ್ಠರನ್ನಲ್ಲ, ಪಾಪಿಷ್ಠರನ್ನು,” ಎಂದರು.
18 : ಯೊವಾನ್ನನ ಶಿಷ್ಯರು ಮತ್ತು ಫರಿಸಾಯರು ಉಪವಾಸವ್ರತವನ್ನು ಕೈಗೊಂಡಿದ್ದ ಒಂದು ಸಂದರ್ಭದಲ್ಲಿ, ಕೆಲವು ಜನರು ಯೇಸುಸ್ವಾಮಿಯ ಬಳಿಗೆ ಬಂದರು. ಅವರು, “ಯೊವಾನ್ನನ ಶಿಷ್ಯರು ಮತ್ತು ಫರಿಸಾಯರ ಶಿಷ್ಯರು ಉಪವಾಸವ್ರತವನ್ನು ಕೈಗೊಳ್ಳುತ್ತಾರೆ, ಆದರೆ ನಿನ್ನ ಶಿಷ್ಯರೇಕೆ ಹಾಗೆ ಮಾಡುವುದಿಲ್ಲ?” ಎಂದು ಕೇಳಿದರು.
19 : ಅದಕ್ಕೆ ಯೇಸು, “ಮದುವಣಿಗನು ಜೊತೆಯಲ್ಲಿ ಇರುವಾಗ ಅವನ ಆಪ್ತರು ಉಪವಾಸ ಮಾಡುವುದುಂಟೆ? ಖಂಡಿತವಾಗಿಯೂ ಇಲ್ಲ. ಅವನು ತಮ್ಮ ಜೊತೆಯಲ್ಲಿರುವಷ್ಟು ಕಾಲ ಅವರು ಉಪವಾಸ ಮಾಡಲಾಗದು.
20 : ಮದುವಣಿಗನು ಅವರಿಂದ ಅಗಲಬೇಕಾಗುವ ಕಾಲ ಬರುವುದು. ಆಗ ಅವರು ಉಪವಾಸ ಮಾಡುವರು.
21 : “ಹಳೆಯ ಅಂಗಿಗೆ ಹೊಸ ಬಟ್ಟೆಯ ತೇಪೆಯನ್ನು ಯಾರೂ ಹಾಕುವುದಿಲ್ಲ. ಹಾಕಿದಲ್ಲಿ, ಹೊಸ ತೇಪೆಯು ಹಳೆಯ ಅಂಗಿಯನ್ನು ಹಿಂಜುವುದರಿಂದ ಹರಕು ಹೆಚ್ಚಾಗುತ್ತದೆ.
22 : ಅಂತೆಯೇ ಹಳೆಯ ಬುದ್ದಲಿಗಳಲ್ಲಿ ಹೊಸ ಮದ್ಯವನ್ನು ಯಾರೂ ತುಂಬಿಡುವುದಿಲ್ಲ. ತುಂಬಿಟ್ಟರೆ ಅದರಿಂದ ಬುದ್ದಲಿಗಳು ಬಿರಿಯುತ್ತವೆ. ಮದ್ಯವು ಮತ್ತು ಬುದ್ದಲಿಗಳು ಎರಡೂ ನಷ್ಟವಾಗುತ್ತವೆ. ಆದುದರಿಂದ ಹೊಸ ಮದ್ಯವನ್ನು ಹೊಸ ಬುದ್ದಲಿಗಳಲ್ಲೇ ತುಂಬಿಡಬೇಕು,” ಎಂದರು. ಯೇಸು ಸಬ್ಬತ್ತಿಗೂ ಒಡೆಯ (ಮತ್ತಾ. 12.1-8; ಲೂಕ 6.1-5)
23 : ಅದೊಂದು ಸಬ್ಬತ್ ದಿನ. ಯೇಸುಸ್ವಾಮಿ ಗೋದಿಯ ಹೊಲಗಳಲ್ಲಿ ಹಾದು ಹೋಗುತ್ತಿದ್ದರು. ಜೊತೆಯಲ್ಲಿದ್ದ ಅವರ ಶಿಷ್ಯರು ತೆನೆಗಳನ್ನು ಕೀಳಲಾರಂಭಿಸಿದರು.
24 : ಇದನ್ನು ಕಂಡ ಫರಿಸಾಯರು, “ನೋಡು, ಸಬ್ಬತ್‍ದಿನದಲ್ಲಿ ನಿಷಿದ್ಧವಾದುದನ್ನು ನಿನ್ನ ಶಿಷ್ಯರು ಮಾಡುತ್ತಿದ್ದಾರೆ, ಇದು ಸರಿಯೇ?” ಎಂದು ಯೇಸುವನ್ನು ಪ್ರಶ್ನಿಸಿದರು.
25 : ಅದಕ್ಕೆ ಯೇಸು, “ಹಿಂದೆ, ಅರಸ ದಾವೀದನು ಮತ್ತು ಅವನ ಸಂಗಡಿಗರು ಹಸಿದಿದ್ದು, ಉಣ್ಣಲು ಏನೂ ಇಲ್ಲದಿದ್ದಾಗ ಏನು ಮಾಡಿದರೆಂಬುದನ್ನು ನೀವು ಓದಿರಬೇಕಲ್ಲವೇ?
26 : ಪ್ರಧಾನಯಾಜಕ ಅಬಿಯಾತರನ ಕಾಲದಲ್ಲಿ ಅವನು ದೇವಮಂದಿರದೊಳಕ್ಕೆ ಹೋಗಿ, ಯಾಜಕನ ಹೊರತು ಬೇರೆ ಯಾರೂ ತಿನ್ನಬಾರದಾಗಿದ್ದ ನೈವೇದ್ಯದ ರೊಟ್ಟಿಗಳನ್ನೇ ತಿಂದ; ಅಲ್ಲದೆ, ತನ್ನ ಸಂಗಡ ಇದ್ದವರಿಗೂ ಕೊಟ್ಟನಲ್ಲವೇ?” ಎಂದು ಅವರನ್ನು ಕೇಳಿದರು.
27 : ಬಳಿಕ ಯೇಸು ಅವರಿಗೆ, “ಸಬ್ಬತ್ ದಿನ ಇರುವುದು ಮನುಷ್ಯನಿಗಾಗಿ ಹೊರತು ಮನುಷ್ಯ ಇರುವುದು ಸಬ್ಬತ್ತಿಗಾಗಿ ಅಲ್ಲ.
28 ಆದುದರಿಂದ ನರಪುತ್ರನು ಸಬ್ಬತ್ತಿಗೂ ಒಡೆಯ,” ಎಂದರು.

Holydivine