Luke - Chapter 7
Holy Bible

1 : ಜನರಿಗೆ ಮನಮುಟ್ಟುವಂತೆ ಬೋಧನೆ ಮಾಡಿದ ನಂತರ ಯೇಸುಸ್ವಾಮಿ ಕಫೆರ್ನವುಮ್ ಎಂಬ ಊರಿಗೆ ಬಂದರು.
2 : ಅಲ್ಲಿ ರೋಮ್ ಶತಾಧಿಪತಿಯೊಬ್ಬನ ನೆಚ್ಚಿನ ಸೇವಕನು ಕಾಯಿಲೆಯಿಂದ ಸಾಯುವುದರಲ್ಲಿದ್ದನು.
3 : ಶತಾಧಿಪತಿ ಯೇಸುವಿನ ವಿಷಯವನ್ನು ಕೇಳಿ ಅವರ ಬಳಿಗೆ ಯೆಹೂದ್ಯ ಪ್ರಮುಖರನ್ನು ಕಳುಹಿಸಿ, ತನ್ನ ಸೇವಕನನ್ನು ಗುಣಪಡಿಸಲು ಬರಬೇಕೆಂದು ಮನವಿ ಮಾಡಿಕೊಂಡನು.
4 : ಅವರು ಯೇಸುವಿನ ಬಳಿಗೆ ಬಂದು, “ಆ ಶತಾಧಿಪತಿ ನಿಮ್ಮ ಉಪಕಾರಕ್ಕೆ ಅರ್ಹನು;
5 : ನಮ್ಮ ಜನರ ಮೇಲೆ ಅವನಿಗೆ ಪ್ರೀತಿ ಇದೆ; ಅಲ್ಲದೆ ನಮ್ಮ ಪ್ರಾರ್ಥನಾಮಂದಿರವನ್ನು ಕಟ್ಟಿಸಿಕೊಟ್ಟವನೂ ಅವನೇ,” ಎಂದು ಬಹಳವಾಗಿ ವಿನಂತಿಸಿದರು.
6 : ಯೇಸು ಅವರ ಸಂಗಡವೇ ಹೊರಟರು. ಮನೆಯಿಂದ ಸ್ವಲ್ಪ ದೂರವಿರುವಾಗಲೇ, ಶತಾಧಿಪತಿ ತನ್ನ ಗೆಳೆಯರ ಮುಖಾಂತರ, “ಪ್ರಭುವೇ, ಇಷ್ಟು ಶ್ರಮ ತೆಗೆದುಕೊಳ್ಳಬೇಡಿ; ತಾವು ನನ್ನ ಮನೆಗೆ ಬರುವಷ್ಟು ಯೋಗ್ಯತೆ ನನಗಿಲ್ಲ.
7 : ನಾನೇ ತಮ್ಮಲ್ಲಿಗೆ ಬರೋಣವೆಂದರೆ ಆ ಯೋಗ್ಯತೆಯೂ ನನಗಿಲ್ಲ. ತಾವು ಒಂದು ಮಾತು ಹೇಳಿದರೆ ಸಾಕು, ನನ್ನ ಸೇವಕ ಸ್ವಸ್ಥನಾಗುವನು.
8 : ಏಕೆಂದರೆ, ನಾನೂ ಮತ್ತೊಬ್ಬರ ಕೈಕೆಳಗಿರುವವನು; ನನ್ನ ಅಧೀನದಲ್ಲೂ ಸೈನಿಕರಿದ್ದಾರೆ. ಅವರಲ್ಲಿ ಒಬ್ಬನಿಗೆ ನಾನು ‘ಬಾ,’ ಎಂದರೆ ಬರುತ್ತಾನೆ. ಇನ್ನೊಬ್ಬನಿಗೆ ‘ಹೋಗು,’ ಎಂದರೆ ಹೋಗುತ್ತಾನೆ. ಸೇವಕನಿಗೆ ‘ಇಂಥದ್ದನ್ನು ಮಾಡು,’ ಎಂದರೆ ಮಾಡುತ್ತಾನೆ.” ಎಂದು ಹೇಳಿ ಕಳುಹಿಸಿದನು.
9 : ಅವನ ಈ ಮಾತುಗಳನ್ನು ಕೇಳಿದಾಗ ಯೇಸುವಿಗೆ ಆಶ್ಚರ್ಯವಾಯಿತು. ತಮ್ಮ ಹಿಂದೆ ಬರುತ್ತಿದ್ದ ಜನರ ಗುಂಪಿನ ಕಡೆ ತಿರುಗಿನೋಡಿ, “ಇಂಥ ಗಾಢ ವಿಶ್ವಾಸವನ್ನು ನಾನು ಇಸ್ರಯೇಲ್ ಜನರಲ್ಲೂ ಕಾಣಲಿಲ್ಲವೆಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ,” ಎಂದರು.
10 : ಇತ್ತ ಶತಾಧಿಪತಿಯ ಕಡೆಯಿಂದ ಬಂದವರು ಮನೆಗೆ ಹಿಂದಿರುಗಿದಾಗ ಕಾಯಿಲೆಬಿದ್ದಿದ್ದ ಆ ಸೇವಕನು ಸ್ವಸ್ಥನಾಗಿದ್ದುದನ್ನು ಕಂಡರು. ವಿಧವೆಯ ಮಗನಿಗೆ ಜೀವದಾನ
11 : ಇದಾದನಂತರ ಯೇಸುಸ್ವಾಮಿ ನಾಯಿನ್ ಎಂಬ ಊರಿಗೆ ಹೊರಟರು. ಅವರೊಂದಿಗೆ ಶಿಷ್ಯರೂ ಅನೇಕ ಜನರೂ ಹೊರಟರು.
12 : ಊರಬಾಗಿಲನ್ನು ಸಮೀಪಿಸಿದಾಗ, ಒಂದು ಶವಯಾತ್ರೆಯನ್ನು ಅವರು ಎದುರುಗೊಂಡರು. ಆ ಸತ್ತವನು ತನ್ನ ತಾಯಿಗೆ ಒಬ್ಬನೇ ಮಗ. ಆಕೆಯೋ ವಿಧವೆ. ಜನರ ದೊಡ್ಡ ಗುಂಪೊಂದು ಆಕೆಯೊಡನೆ ಬರುತ್ತಿತ್ತು.
13 : ಪ್ರಭು ಯೇಸು ಆಕೆಯನ್ನು ಕಂಡದ್ದೇ ಕನಿಕರಗೊಂಡು, ‘ಅಳಬೇಡ’ ಎಂದು ಹೇಳಿ,
14 : ಚಟ್ಟದ ಹತ್ತಿರಕ್ಕೆ ಬಂದು, ಅದನ್ನು ಮುಟ್ಟಿದರು. ಹೊತ್ತುಕೊಂಡು ಹೋಗುತ್ತಿದ್ದವರು ಹಾಗೆಯೇ ನಿಂತರು. ಆಗ ಯೇಸು, “ಯುವಕನೇ, ನಾನು ನಿನಗೆ ಹೇಳುತ್ತೇನೆ, ಎದ್ದೇಳು,” ಎಂದರು.
15 : ಸತ್ತವನು ಎದ್ದು ಕುಳಿತು ಮಾತನಾಡಲಾರಂಭಿಸಿದನು. ಯೇಸು ಆ ಮಗನನ್ನು ತಾಯಿಗೆ ಒಪ್ಪಿಸಿದರು.
16 : ಎಲ್ಲರೂ ಭಯಭ್ರಾಂತರಾದರು. “ಮಹಾಪ್ರವಾದಿಯೊಬ್ಬನು ನಮ್ಮಲ್ಲೇ ಉದಯಿಸಿದ್ದಾನೆ; ದೇವರು ತಮ್ಮ ಜನರನ್ನು ರಕ್ಷಿಸಲು ಬಂದಿದ್ದಾರೆ,” ಎಂದು ದೇವರನ್ನು ಕೊಂಡಾಡಿದರು.
17 : ಯೇಸುವಿನ ಈ ಸಮಾಚಾರ ಜುದೇಯ ನಾಡಿನಲ್ಲೆಲ್ಲಾ ಹಾಗೂ ಸುತ್ತಮುತ್ತಲಿನ ಪ್ರಾಂತ್ಯದಲ್ಲೆಲ್ಲಾ ಹರಡಿತು. ಸ್ನಾನಿಕ ಯೊವಾನ್ನನ ಪ್ರಶ್ನೆಗೆ ಉತ್ತರ (ಮತ್ತಾ. 11.1-19)
18 : ನಡೆದ ಈ ವಿಷಯವೆಲ್ಲ ಯೊವಾನ್ನನಿಗೆ ತನ್ನ ಶಿಷ್ಯರ ಮುಖಾಂತರ ತಿಳಿಯಿತು.
19 : ಆತನು ತನ್ನ ಶಿಷ್ಯರಲ್ಲಿ ಇಬ್ಬರನ್ನು ಕರೆದು, “ಬರಬೇಕಾದವರು ನೀವೋ ಅಥವಾ ಬೇರೊಬ್ಬರಿಗಾಗಿ ನಾವು ಎದುರು ನೋಡಬೇಕೋ?” ಎಂದು ಯೇಸುಸ್ವಾಮಿಯನ್ನು ಕೇಳಲು ಅವರ ಬಳಿಗೆ ಕಳುಹಿಸಿದನು.
20 : ಆ ಶಿಷ್ಯರು ಯೇಸುವಿನ ಬಳಿಗೆ ಬಂದು, ಬರಬೇಕಾದವರು ನೀವೋ ಅಥವಾ ನಾವು ಬೇರೊಬ್ಬರನ್ನು ಎದುರು ನೋಡಬೇಕೊ ಎಂದು ವಿಚಾರಿಸಲು ಸ್ನಾನಿಕ ಯೊವಾನ್ನ ನಮ್ಮನ್ನು ತಮ್ಮ ಬಳಿಗೆ ಕಳುಹಿಸಿದ್ದಾರೆ,” ಎಂದರು.
21 : ಅದೇ ಸಮಯದಲ್ಲಿ ಯೇಸು ರೋಗರುಜಿನಗಳಿಂದ ನರಳುತ್ತಿದ್ದ ಹಾಗೂ ದೆವ್ವ ಹಿಡಿದಿದ್ದ ಅನೇಕರನ್ನು ಗುಣಪಡಿಸುತ್ತಿದ್ದರು ಮತ್ತು ಹಲವು ಮಂದಿ ಕುರುಡರಿಗೆ ದೃಷ್ಟಿಯನ್ನು ದಯಪಾಲಿಸುತ್ತಿದ್ದರು.
22 : ಯೇಸು ಅವರಿಗೆ ಪ್ರತ್ಯುತ್ತರವಾಗಿ, “ನೀವು ಕಂಡದ್ದನ್ನೂ ಕೇಳಿದ್ದನ್ನೂ ಯೊವಾನ್ನನಿಗೆ ಹೋಗಿ ತಿಳಿಸಿರಿ: ಕುರುಡರು ನೋಡುತ್ತಾರೆ, ಕುಂಟರು ನಡೆಯುತ್ತಾರೆ, ಕುಷ್ಠರೋಗಿಗಳು ಸ್ವಸ್ಥರಾಗುತ್ತಾರೆ, ಕಿವುಡರು ಕೇಳುತ್ತಾರೆ, ಸತ್ತವರು ಮತ್ತೆ ಜೀವ ಪಡೆಯುತ್ತಾರೆ. ದೀನದಲಿತರಿಗೆ ಶುಭಸಂದೇಶವನ್ನು ಪ್ರಕಟಿಸಲಾಗುತ್ತಿದೆ.
23 : ನನ್ನಲ್ಲಿ ವಿಶ್ವಾಸ ಕಳೆದುಕೊಳ್ಳದವನು ಭಾಗ್ಯವಂತನು,” ಎಂದು ಹೇಳಿ ಕಳುಹಿಸಿದರು.
24 : ಬಂದಿದ್ದ ಶಿಷ್ಯರು ಹಿಂದಕ್ಕೆ ಹೋದ ಬಳಿಕ, ಯೇಸು ಜನಸಮೂಹಕ್ಕೆ ಯೊವಾನ್ನನನ್ನು ಕುರಿತು ಹೀಗೆಂದರು: “ಬೆಂಗಾಡಿನಲ್ಲಿ ನೀವು ಏನನ್ನು ನೋಡಲೆಂದು ಹೋದಿರಿ? ಗಾಳಿಗೆ ಓಲಾಡುವ ಜೊಂಡನ್ನೇ?
25 : ಇಲ್ಲವಾದರೆ ಮತ್ತೇನನ್ನು ನೋಡಹೋದಿರಿ? ನಯವಾದ ರೇಷ್ಮೆ ಉಡುಪನ್ನು ಧರಿಸಿರುವ ವ್ಯಕ್ತಿಯನ್ನೇ? ಅಂಥ ಶೃಂಗಾರವಾದ ಉಡುಗೆ ತೊಡುಗೆಯನ್ನು ಧರಿಸಿ, ಭೋಗಜೀವನ ನಡೆಸುವವರು ಅರಮನೆಗಳಲ್ಲಿರುತ್ತಾರಷ್ಟೆ!
26 : ಹಾಗಾದರೆ ನೀವು ಇನ್ನೇನನ್ನು ನೋಡಲು ಹೋದಿರಿ? ಪ್ರವಾದಿಯನ್ನೇ? ಹೌದು, ಪ್ರವಾದಿಗಿಂತಲೂ ಶ್ರೇಷ್ಠನಾದವನನ್ನು ನೋಡಿದಿರಿ, ಎಂಬುದು ನಿಜ.
27 : “ ‘ಇಗೋ, ನನ್ನ ದೂತನನ್ನು ನಿನಗೆ ಮುಂದಾಗಿ ಕಳುಹಿಸುವೆನು. ಆತನು ನಿನ್ನ ಮಾರ್ಗವನ್ನು ಮುಂಚಿತವಾಗಿ ಸಿದ್ದಗೊಳಿಸುವನು,’ ಎಂದು ಪವಿತ್ರಗ್ರಂಥದಲ್ಲಿ ಪ್ರಸ್ತಾಪಿಸಿರುವುದು ಈ ಯೊವಾನ್ನನನ್ನು ಕುರಿತೇ.
28 : ಮಾನವನಾಗಿ ಜನಿಸಿದ ಯಾವನೂ ಸ್ನಾನಿಕ ಯೊವಾನ್ನನಿಗಿಂತ ಶ್ರೇಷ್ಠನಲ್ಲ ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ. ಆದರೂ ದೇವರ ಸಾಮ್ರಾಜ್ಯದಲ್ಲಿ ಕನಿಷ್ಠನು ಕೂಡ ಅವನಿಗಿಂತ ಶ್ರೇಷ್ಠನೇ ಸರಿ,” ಎಂದರು.
29 : ಯೊವಾನ್ನನ ಉಪದೇಶವನ್ನು ಜನ ಸಾಮಾನ್ಯರೆಲ್ಲರೂ ಕೇಳಿದರು. ಅವರು, ವಿಶೇಷವಾಗಿ ಸುಂಕದವರು, ದೈವಯೋಜನೆಗೆ ತಲೆಬಾಗಿ ಆತನಿಂದ ಸ್ನಾನದೀಕ್ಷೆಯನ್ನು ಪಡೆದರು.
30 : ಆದರೆ ಫರಿಸಾಯರು ಮತ್ತು ಧರ್ಮಶಾಸ್ತ್ರಿಗಳು ತಮ್ಮನ್ನು ಕುರಿತಾದ ದೈವೇಚ್ಛೆಯನ್ನು ಅಲ್ಲಗಳೆದು, ಯೊವಾನ್ನನಿಂದ ಸ್ನಾನದೀಕ್ಷೆಯನ್ನು ಪಡೆಯದೆಹೋದರು. ಲೋಕನೀತಿ ದೈವನೀತಿಯಲ್ಲ
31 : ಯೇಸುಸ್ವಾಮಿ ತಮ್ಮ ಬೋಧನೆಯನ್ನು ಮುಂದುವರಿಸುತ್ತಾ, “ಈ ಕಾಲದ ಜನರನ್ನು ಯಾರಿಗೆ ಹೋಲಿಸಲಿ? ಇವರು ಯಾರನ್ನು ಹೋಲುತ್ತಾರೆ?
32 : ಪೇಟೆಬೀದಿಯಲ್ಲಿ ಕುಳಿತು, ‘ನಾವು ಕೊಳಲನೂದಲು ನೀವು ಕುಣಿದಾಡಲಿಲ್ಲ; ನಾವು ಶೋಕಗೀತೆಗಳ ಹಾಡಲು ನೀವು ಕಣ್ಣೀರಿಡಲಿಲ್ಲ’ ಎಂದು ಒಬ್ಬರಿಗೊಬ್ಬರು ಕೂಗಾಡುವ ಮಕ್ಕಳನ್ನು ಹೋಲುತ್ತಾರೆ.
33 : ಸ್ನಾನಿಕ ಯೊವಾನ್ನನು ಬಂದಾಗ ಅನ್ನ ಆಹಾರವನ್ನು ಸೇವಿಸಲಿಲ್ಲ, ದ್ರಾಕ್ಷಾರಸವನ್ನು ಮುಟ್ಟಲಿಲ್ಲ; ನೀವು, ‘ಅವನಿಗೆ ದೆವ್ವ ಹಿಡಿದಿದೆ,’ ಎಂದು ಹೇಳಿದಿರಿ;
34 : ನರಪುತ್ರನು ಬಂದಾಗ ಅನ್ನ ಪಾನೀಯಗಳನ್ನು ಸೇವಿಸಿದನು; ನೀವು, ‘ಇವನೊಬ್ಬ ಹೊಟ್ಟೆಬಾಕ, ಕುಡುಕ, ಸುಂಕದವರ ಹಾಗೂ ಪಾಪಿಷ್ಠರ ಗೆಳೆಯ, ಎನ್ನುತ್ತೀರಿ.
35 : ಆದರೆ ದೈವಜ್ಞಾನವೇ ನಿಜವಾದ ಜ್ಞಾನವೆಂದು ಅದನ್ನು ಅಂಗೀಕರಿಸುವ ಎಲ್ಲರೂ ಸಮರ್ಥಿಸುತ್ತಾರೆ,” ಎಂದರು. ಪತಿತ ಪಾವನ ಯೇಸು
36 : ಒಬ್ಬ ಫರಿಸಾಯನು ಯೇಸುಸ್ವಾಮಿಯನ್ನು ಊಟಕ್ಕೆ ಆಹ್ವಾನಿಸಿದನು. ಯೇಸು ಅವನ ಮನೆಗೆ ಹೋಗಿ ಊಟಕ್ಕೆ ಕುಳಿತರು.
37 : ಅದೇ ಊರಿನಲ್ಲಿ ಪತಿತೆಯೊಬ್ಬಳು ಇದ್ದಳು. ಆಕೆ, ಫರಿಸಾಯನ ಮನೆಯಲ್ಲಿ ಯೇಸು ಊಟಕ್ಕೆ ಕುಳಿತಿದ್ದಾರೆಂದು ಕೇಳಿ ಒಂದು ಅಮೃತಶಿಲೆಯ ಭರಣಿ ತುಂಬ ಸುಗಂಧ ತೈಲವನ್ನು ತೆಗೆದುಕೊಂಡು ಅಲ್ಲಿಗೆ ಬಂದಳು.
38 : ಅವಳು ಯೇಸುವಿನ ಹಿಂಬದಿಯಲ್ಲಿ ಅಳುತ್ತಾ ನಿಂತು, ತನ್ನ ಕಂಬನಿಯಿಂದ ಅವರ ಪಾದಗಳನ್ನು ತೊಳೆದು ತಲೆಕೂದಲಿನಿಂದ ಒರಸಿ, ಆ ಪಾದಗಳಿಗೆ ಮುತ್ತಿಟ್ಟು, ಸುಗಂಧ ತೈಲವನ್ನು ಹಚ್ಚಿದಳು.
39 : ಯೇಸುವನ್ನು ಆಹ್ವಾನಿಸಿದ ಫರಿಸಾಯನು ಇದನ್ನು ನೋಡಿ, ‘ಇವನು ನಿಜವಾಗಿಯೂ ಪ್ರವಾದಿಯಾಗಿದ್ದರೆ ತನ್ನನ್ನು ಮುಟ್ಟುತ್ತಿರುವ ಇವಳು ಯಾರು, ಎಂಥಾ ಪತಿತಳು, ಎಂದು ತಿಳಿದುಕೊಳ್ಳುತ್ತಿದ್ದನು’ ಎಂದು ತನ್ನೊಳಗೇ ಅಂದುಕೊಂಡನು.
40 : ಅದಕ್ಕೆ ಯೇಸು, “ಸಿಮೋನ್, ನಾನು ನಿನಗೆ ಹೇಳಬೇಕಾದ ವಿಷಯ ಒಂದಿದೆ,” ಎಂದರು. ಸಿಮೋನನು, “ಅದೇನು ಹೇಳಿ ಗುರುವೇ,” ಎಂದನು.
41 : ಆಗ ಯೇಸು, “ಒಬ್ಬ ಸಾಲಿಗನಿಗೆ ಇಬ್ಬರು ಸಾಲಗಾರರಿದ್ದರು. ಒಬ್ಬನು ಐನೂರು, ಇನ್ನೊಬ್ಬನು ಐವತ್ತು ಬೆಳ್ಳಿ ನಾಣ್ಯಗಳನ್ನು ಅವನಿಗೆ ಸಾಲ ಕೊಡಬೇಕಾಗಿತ್ತು.
42 : ಆ ಇಬ್ಬರಿಗೂ ಸಾಲ ತೀರಿಸಲು ಸಾಧ್ಯವಾಗಲಿಲ್ಲ. ಸಾಲಿಗನು ಇಬ್ಬರ ಸಾಲವನ್ನು ಮನ್ನಾ ಮಾಡಿದನು. ಈಗ ಹೇಳು, ಈ ಇಬ್ಬರಲ್ಲಿ “ಯಾರಿಗೆ ಆ ಸಾಲಿಗನ ಮೇಲೆ ಹೆಚ್ಚು ಪ್ರೀತಿ?” ಎಂದು ಕೇಳಿದರು.
43 : ಅದಕ್ಕೆ ಸಿಮೋನನು, “ಯಾರು ಹೆಚ್ಚು ಸಾಲದಿಂದ ಬಿಡುಗಡೆ ಹೊಂದಿದ್ದಾನೋ ಅವನೇ ಎಂದು ತೋರುತ್ತದೆ,” ಎಂದನು. “ಸರಿಯಾಗಿ ಹೇಳಿದೆ,” ಎಂದರು ಯೇಸು.
44 : ಅನಂತರ ಆ ಮಹಿಳೆಯ ಕಡೆ ತಿರುಗಿ ಸಿಮೋನನಿಗೆ, “ಈಕೆಯನ್ನು ನೋಡಿದೆಯಾ? ನಾನು ನಿನ್ನ ಮನೆಗೆ ಬಂದಾಗ ನೀನು ನನ್ನ ಕಾಲಿಗೆ ನೀರು ಕೊಡಲಿಲ್ಲ; ಈಕೆಯಾದರೋ ನನ್ನ ಪಾದಗಳನ್ನು ತನ್ನ ಕಣ್ಣೀರಿನಿಂದ ತೊಳೆದು ತಲೆಗೂದಲಿನಿಂದ ಒರೆಸಿರುವಳು.
45 : ನೀನು ನನಗೆ ಮುತ್ತಿಟ್ಟು ಸ್ವಾಗತಿಸಲಿಲ್ಲ; ಆದರೆ ಈಕೆ ಒಳಗೆ ಬಂದಾಗಿನಿಂದ ನನ್ನ ಪಾದಗಳಿಗೆ ಮುತ್ತಿಡುವುದನ್ನು ನಿಲ್ಲಿಸಿಲ್ಲ;
46 : ನನ್ನ ತಲೆಗೆ ನೀನು ಎಣ್ಣೆ ಹಚ್ಚಲಿಲ್ಲ; ಈಕೆಯೋ ನನ್ನ ಪಾದಗಳಿಗೆ ಸುಗಂಧ ತೈಲವನ್ನು ಹಚ್ಚಿರುವಳು.
47 : ಆದ್ದರಿಂದ ನಾನು ನಿನಗೆ ಹೇಳುವುದೇನೆಂದರೆ, ಈಕೆ ಮಾಡಿದ ಪಾಪಗಳು ಅಪಾರವಾದರೂ ಅವನ್ನು ಕ್ಷಮಿಸಲಾಗಿವೆ; ಇದಕ್ಕೆ ಈಕೆ ತೋರಿಸಿರುವ ಅಧಿಕವಾದ ಪ್ರೀತಿಯೇ ಸಾಕ್ಷಿ. ಕಡಿಮೆ ಕ್ಷಮೆಪಡೆದವನು ಕಡಿಮೆ ಪ್ರೀತಿ ತೋರಿಸುತ್ತಾನೆ,” ಎಂದರು.
48 : ಅನಂತರ ಯೇಸು ಆ ಮಹಿಳೆಗೆ: “ನಿನ್ನ ಪಾಪಗಳನ್ನು ಕ್ಷಮಿಸಲಾಗಿದೆ,” ಎಂದರು.
49 : ಜೊತೆಯಲ್ಲಿ ಊಟಕ್ಕೆ ಕುಳಿತಿದ್ದವರು ಇದನ್ನು ಕೇಳಿ, “ಪಾಪಗಳನ್ನು ಕೂಡ ಕ್ಷಮಿಸುವ ಈತ ಯಾರು?” ಎಂದು ತಮ್ಮತಮ್ಮಲ್ಲೇ ಹೇಳಿಕೊಂಡರು.
50 : ಯೇಸು ಆಕೆಗೆ, “ನಿನ್ನ ವಿಶ್ವಾಸ ನಿನ್ನನ್ನು ಉದ್ಧಾರ ಮಾಡಿದೆ; ಸಮಾಧಾನದಿಂದ ಹೋಗು,” ಎಂದರು. ಯೇಸುವಿನ ಭಕ್ತೆಯರು

Holydivine