Zephanaiah - Chapter 3
Holy Bible

1 : ದಬ್ಬಾಳಿಕೆ ನಡೆಸುವ, ದಂಗೆಯೇಳುವ ದುಷ್ಟ ನಗರಕ್ಕೆ ದಿಕ್ಕಾರ!
2 : ಅದು ಯಾರ ಬುದ್ಧಿಮಾತಿಗೂ ಕಿವಿಗೊಡಲಿಲ್ಲ. ಶಿಕ್ಷಣಕ್ಕೆ ಒಳಪಡಲಿಲ್ಲ. ಸರ್ವೇಶ್ವರಸ್ವಾಮಿಯಲ್ಲಿ ಭರವಸೆ ಇಡಲಿಲ್ಲ. ತನ್ನ ದೇವರ ಸನ್ನಿಧಿಗೆ ಬರಲಿಲ್ಲ.
3 : ಅದರ ಪ್ರಮುಖರು ಗರ್ಜಿಸುವ ಸಿಂಹಗಳು. ಅದರ ನ್ಯಾಯಾಧಿಪತಿಗಳು ಹಸಿದ ತೋಳಗಳು. ಕಡಿಯುವುದಕ್ಕೆ ಎಲುಬನ್ನು ಕೂಡ ಮರುದಿನದವರೆಗೆ ಉಳಿಸವು.
4 : ಅದರ ಪ್ರವಾದಿಗಳು ಬಡಾಯಿ ಕೊಚ್ಚುವವರು, ವಿಶ್ವಾಸದ್ರೋಹಿಗಳು. ಅದರ ಯಾಜಕರು ಪವಿತ್ರವಾದುದನ್ನು ಹೊಲೆಗೆಡಿಸುವಂಥವರು, ಧರ್ಮವಿಧಿಗಳನ್ನು ಭಂಗಪಡಿಸುವಂಥವರು.
5 : ಆದರೆ ಅದರ ಮಧ್ಯೆಯಿರುವ ಸರ್ವೇಶ್ವರ ನ್ಯಾಯಸ್ವರೂಪಿ, ಎಂದಿಗೂ ಅನ್ಯಾಯ ಮಾಡುವುದಿಲ್ಲ. ದಿನದಿನವೂ ತಪ್ಪದೆ ನ್ಯಾಯ ದೊರಕಿಸುತ್ತಾರೆ. ಅವರಿಗೆ ಗುಟ್ಟಾಗಿರುವುದು ಯಾವುದೂ ಇಲ್ಲ. ಅನ್ಯಾಯಮಾಡುವವನಿಗಾದರೋ ನಾಚಿಕೆ ಎಂಬುದೇ ಇಲ್ಲ.
6 : ಸರ್ವೇಶ್ವರ ಇಂತೆನ್ನುತ್ತಾರೆ: “ ‘ನಾನು ರಾಷ್ಟ್ರಗಳನ್ನು ಧ್ವಂಸಮಾಡಿದ್ದೇನೆ. ಅವುಗಳ ಕೋಟೆಕೊತ್ತಲಗಳು ಪಾಳುಬಿದ್ದಿವೆ. ಅವುಗಳ ಹಾದಿಬೀದಿಗಳನ್ನು ನಿರ್ಜನವಾಗಿಸಿದ್ದೇನೆ. ಯಾರೂ ಅವುಗಳಲ್ಲಿ ಹಾದುಹೋಗುವಂತಿಲ್ಲ. ಅವರ ಪಟ್ಟಣಗಳು ನಾಶವಾಗಿವೆ; ನಿರ್ನಿವಾಸವಾಗಿ ಶೂನ್ಯವಾಗಿವೆ.
7 : ಇದರಿಂದಲಾದರೂ ಜೆರುಸಲೇಮ್ ನಗರ ನನಗೆ ಭಯಪಡುವುದು, ನಾನು ಕಲಿಸಿದ ಪಾಠವನ್ನು ಎಂದಿಗೂ ಮರೆಯದು’ ಎಂದುಕೊಂಡೆ. ಆದರೆ ಅದರ ನಿವಾಸಿಗಳು ತಮ್ಮ ನಡತೆಯನ್ನು ಕೆಡಿಸಿಕೊಳ್ಳಲು ಮತ್ತಷ್ಟು ಕಾತರರಾದರು.”
8 : ಆದುದರಿಂದ ಸರ್ವೇಶ್ವರ ಇಂತೆನ್ನುತ್ತಾರೆ: “ಸ್ವಲ್ಪತಾಳಿರಿ, ನಾನು ತಪ್ಪನ್ನು ನಿಮಗೆ ತೋರಿಸುವ ದಿನಕ್ಕಾಗಿ ಕಾದಿರಿ. ರಾಷ್ಟ್ರಗಳನ್ನು ಒಂದಾಗಿಸಲು, ರಾಜ್ಯಗಳನ್ನು ಒಂದುಗೂಡಿಸಲು ನಿರ್ಧರಿಸಿದ್ದೇನೆ; ಹೀಗೆ ಅವುಗಳ ಮೇಲೆ ನನ್ನ ರೌದ್ರವನ್ನು, ಹೌದು, ನನ್ನ ಉಗ್ರಕೋಪವನ್ನು ಸುರಿಸಲು ತೀರ್ಮಾನಿಸಿದ್ದೇನೆ. ಲೋಕವೆಲ್ಲವು ನನ್ನ ಕೋಪಾಗ್ನಿಯಿಂದ ಧ್ವಂಸವಾಗುವುದು.
9 : “ಆಗ ಎಲ್ಲರೂ ಒಮ್ಮನಸ್ಸಿನಿಂದ ನನ್ನನ್ನು ಪೂಜಿಸಿ ನನ್ನ ಹೆಸರೆತ್ತಿ ಪ್ರಾರ್ಥಿಸುವಂತೆ ಜನಾಂಗಗಳ ಬಾಯನ್ನು ಪರಿವರ್ತಿಸಿ ಶುದ್ಧೀಕರಿಸುವೆನು.
10 : ಚದರಿಹೋಗಿರುವ ನನ್ನ ಜನರು, ನನ್ನ ಭಕ್ತಾದಿಗಳು, ಸುಡಾನಿನ ನದಿಗಳ ಆಚೆಯಿಂದಲೂ ನನಗೆ ಕಾಣಿಕೆಯನ್ನು ತಂದೊಪ್ಪಿಸುವರು.
11 : ನೀನು ನನಗೆ ಎದುರಾಗಿ ದಂಗೆಯೆದ್ದು ಮಾಡಿದ ನಾನಾ ದುಷ್ಕøತ್ಯಗಳಿಗಾಗಿ ಆ ದಿನದಂದು ನೀನು ನಾಚಿಕೆಪಡುವ ಅವಶ್ಯಕತೆ ಇರುವುದಿಲ್ಲ. ಏಕೆಂದರೆ ಅತಿ ಗರ್ವದಿಂದ ಮೆರೆಯುವವರನ್ನು ನಿನ್ನ ಮಧ್ಯೆಯಿಂದ ತೊಲಗಿಸಿಬಿಡುವೆನು. ಅಂದಿನಿಂದ ನನ್ನ ಪವಿತ್ರ ಪರ್ವತದ ಮೇಲೆ ನೀನು ಗರ್ವಪಡದೆ ಬಾಳುವೆ.
12 : ದೀನರೂ ನಮ್ರರೂ ಆದ ಜನರನ್ನು ನಿನ್ನಲ್ಲಿ ಉಳಿಸುವೆನು. ಅವರು ಪ್ರಭುವಿನ ನಾಮದಲ್ಲಿ ಭಯಭಕ್ತಿಯಿಂದಿರುವರು.
13 : ಇಸ್ರಯೇಲಿನಲ್ಲಿ ಅಳಿದುಳಿದವರು ಅನ್ಯಾಯ ಮಾಡರು, ಸುಳ್ಳಾಡರು. ಅವರ ಬಾಯಲ್ಲಿ ಮೋಸವಿರದು. ಕುರಿಮಂದೆಯಂತೆ ಮೇದು ಸುರಕ್ಷಿತವಾಗಿರುವರು. ಅವರನ್ನು ಯಾರೂ ಹೆದರಿಸರು.” ಆನಂದ ಗೀತೆ
14 : ಹರ್ಷಧ್ವನಿಗೈ, ಸಿಯೋನ್ ಕುವರಿಯೇ ಘೋಷಿಸು, ಇಸ್ರಯೇಲ್ ದೇಶವೇ, ಹೃತ್ಪೂರ್ವಕವಾಗಿ ಸಂತೋಷಿಸು, ಜೆರುಸಲೇಮ್ ನಗರವೇ.
15 : ತಪ್ಪಿಸಿಹನು ಸರ್ವೇಶ ನಿನಗೆ ವಿಧಿಸಿರುವ ದಂಡನೆಗಳನು ತಳ್ಳಿ ಹೊರಗಟ್ಟಿಹನು ನಿನ್ನ ಶತ್ರುಗಳನು ಇಸ್ರಯೇಲಿನ ರಾಜನಾದ ಸರ್ವೇಶ ಇಹನು ನಿನ್ನ ಮಧ್ಯೆ ನೀನಿರುವೆ ಇನ್ನೆಂದಿಗೂ ಕೇಡಿಗಂಜದೆ.
16 : ಜೆರುಸಲೇಮಿಗೆ ಈ ಪರಿ ಹೇಳುವರು ಆ ದಿನದೊಳು: “ಅಂಜಬೇಡ ಸಿಯೋನ್, ಸೋತು ಜೋಲುಬೀಳದಿರಲಿ ನಿನ್ನ ಕೈಗಳು.”
17 : ಪ್ರಸನ್ನವಾಗಿಹನು ದೇವ, ಸರ್ವೇಶ ನಿನ್ನ ಮಧ್ಯೆ ಕೊಡುವನಾ ಶೂರ ನಿನಗೆ ರಕ್ಷಣೆ ಹರ್ಷಾನಂದಗೊಳ್ಳುವನು ನಿನ್ನ ವಿಷಯದಲಿ ಪುನಶ್ಚೇತನಗೊಳಿಸುವನು ನಿನ್ನನು ಪ್ರಶಾಂತ ಪ್ರೀತಿಯಲಿ ಗಾನಗೀತೆಗಳಿಂದ ತೋಷಿಸುವನು ನಿನ್ನಲಿ ಹಬ್ಬಹುಣ್ಣಿಮೆಗಳ ತರದಲಿ.
18 : ತಡೆದುಬಿಡುವನು ಸರ್ವವಿನಾಶವನು ದೂರಮಾಡುವನು ನಿನ್ನಿಂದ ನಿಂದೆ ಅಪಮಾನವನು.
19 : ಆ ದಿನದಲಿ ಇಂತೆನ್ನುವನು: “ದಂಡಿಸುವೆನು ನಿನ್ನನು ಬಾಧಿಸಿದವರನು ಉದ್ಧರಿಸುವೆನು ನಿನ್ನಲ್ಲಿ ಕುಂಟುವವರನು ಒಂದುಗೂಡಿಸುವೆನು ಚದರಿಹೋದವರನು ಬರಮಾಡುವೆನು ಅವಮಾನಿತರಿಗೆ ಸನ್ಮಾನವನು ಗಿಟ್ಟಿಸುವೆನು ನಿಮಗೆ ಜಗದಲ್ಲೆಲ್ಲ ಕೀರ್ತಿಯನು.
20 : ಕರೆದು ತರುವೆನು ನಿಮ್ಮನ್ನು ಆ ಕಾಲದೊಳು ಮರಳಿಸುವೆನು ಮನೆಗೆ ಆ ದಿನದೊಳು. ಹಿಂದಿನ ಸಮೃದ್ಧಿಯನ್ನು ಬರಮಾಡುವೆನು ನಿನ್ನ ಕಣ್ಮುಂದೆ ದೊರಕುವುದಾಗ ನಿನಗೆ ಸ್ತುತಿಕೀರ್ತಿ ಜನಾಂಗಗಳ ಮುಂದೆ.” - ಸರ್ವೇಶ್ವರಸ್ವಾಮಿಯ ನುಡಿಯಿದು.

Holydivine