Ruth - Chapter 4
Holy Bible

1 : ಇತ್ತ ಬೋವಜನು ಊರಿನ ಸಭಾಮಂಟಪದ ಬಳಿ ಹೋಗಿ ಅಲ್ಲಿ ಕುಳಿತುಕೊಂಡನು.
2 : ಅಷ್ಟರಲ್ಲಿ, ಬೋವಜನು ಮುಂಚೆ ಹೇಳಿದ್ದ ಎಲಿಮೆಲೆಕನಿಗೆ ಹತ್ತಿರದ ನೆಂಟನಾಗಿದ್ದವನು ಅಲ್ಲಿಗೆ ಬಂದನು. ಆಗ ಬೋವಜನು ಅವನಿಗೆ: “ಬಾರಪ್ಪಾ, ಇಲ್ಲಿ ಕುಳಿತುಕೊ,” ಎಂದು ಕರೆಯಲು, ಅವನು ಬಂದು ಪಕ್ಕದಲ್ಲೇ ಕುಳಿತುಕೊಂಡನು.
3 : ಆಮೇಲೆ ಬೋವಜನು ಹಿರಿಯರಲ್ಲಿ ಹತ್ತುಮಂದಿಯನ್ನು ಕರೆಸಿದನು. ಅವರೂ ಅಲ್ಲಿಗೆ ಬಂದು ಕುಳಿತುಕೊಂಡರು. ಅನಂತರ ಬೋವಜನು ಆ ನೆಂಟನಿಗೆ, “ನಮಗೆ ಸ್ವಂತ ದವನಾದ ಎಲಿಮೆಲೆಕನಿಗೆ ಸೇರಿದ ಒಂದು ತುಂಡು ಹೊಲ ಇದೆಯಲ್ಲವೇ? ಅದನ್ನು ಮೋವಾಬ್ ನಾಡಿನಿಂದ ಹಿಂದಕ್ಕೆ ಬಂದಿರುವ ನವೊಮಿಯು ಮಾರಬೇಕೆಂದಿದ್ದಾಳೆ. ಇದನ್ನು ನಿನಗೆ ತಿಳಿಸಬೇಕೆನಿಸಿತು.
4 : ಆ ಹೊಲವನ್ನು ಕೊಂಡುಕೊಳ್ಳಲು ನಿನಗೆ ಮನಸ್ಸಿದ್ದರೆ ಇಲ್ಲಿ ಕುಳಿತಿರುವ ಹಿರಿಯರ ಮುಂದೆ ಕೊಂಡುಕೊಳ್ಳುವ ಹಕ್ಕು ಮೊದಲು ನಿನಗೆ, ಅನಂತರ ನನಗೆ ಸೇರಿದ್ದು; ಬೇರೆಯವರಿಗಲ್ಲ,” ಎಂದನು. ಆಗ ಆ ವ್ಯಕ್ತಿ: “ನಾನೇ ಕೊಂಡುಕೊಳ್ಳುತ್ತೇನೆ,” ಎಂದು ಹೇಳಿದನು.
5 : ಆಗ ಬೋವಜನು, “ನೀನು ಆ ಹೊಲವನ್ನು ಕೊಂಡುಕೊಳ್ಳುವುದಾದರೆ, ಅವಳ ಸೊಸೆಯಾದ ಮೋವಾಬದ ರೂತಳನ್ನು ನೀನು ಮದುವೆಯಾಗಬೇಕು. ಆಗ ಆ ಹೊಲದ ಖಾತೆ ಗತಿಸಿದ ಮಗನ ಹೆಸರಿನಲ್ಲೇ ಉಳಿಯುತ್ತದೆ,” ಎಂದು ತಿಳಿಸಿದನು.
6 : ಅದಕ್ಕೆ ಆ ವ್ಯಕ್ತಿ, “ಹಾಗಾದರೆ ಹೊಲವನ್ನು ಕೊಂಡುಕೊಳ್ಳುವ ಹಕ್ಕನ್ನು ನಾನು ಬಿಟ್ಟುಕೊಡುತ್ತೇನೆ. ಇಲ್ಲದಿದ್ದರೆ ನನ್ನ ಕುಟುಂಬಕ್ಕೆ ಸೇರಿರುವ ಆಸ್ತಿಗೆ ನಷ್ಟವಾಗುತ್ತದೆ. ಆದ್ದರಿಂದ ಆ ಹಕ್ಕನ್ನು ನೀನೇ ವಹಿಸಿಕೋ, ನನ್ನಿಂದಾಗದು,” ಎಂದುಬಿಟ್ಟನು.
7 : ಇಸ್ರಯೇಲರಲ್ಲಿ ಆಸ್ತಿಪಾಸ್ತಿಯನ್ನು ಮಾರಾಟಮಾಡುವಾಗ ಅಥವಾ ವಿನಿಮಯಿಸಿ ಕೊಳ್ಳುವಾಗ ಒಂದು ಪದ್ಧತಿ ರೂಢಿಯಲ್ಲಿತ್ತು: ಕೊಡುವವನು ಕೊಳ್ಳುವವನಿಗೆ ತನ್ನ ಪಾದರಕ್ಷೆಯನ್ನು ಕೊಡುತ್ತಿದ್ದನು. ಹೀಗೆ ಇಸ್ರಯೇಲರ ಮಧ್ಯೆ ವ್ಯವಹಾರವು ಇತ್ಯರ್ಥವಾಗುತ್ತಿತ್ತು.
8 : ಅಂತೆಯೇ ಆ ನೆಂಟನು, “ಹೊಲವನ್ನು ನೀನೇ ಕೊಂಡುಕೊ,” ಎಂದು ಹೇಳಿ ತನ್ನ ಪಾದರಕ್ಷೆಯನ್ನು ಬೋವಜನಿಗೆ ತೆಗೆದುಕೊಟ್ಟನು.
9 : ಆಗ ಬೋವಜನು ಊರಿನ ಹಿರಿಯರೆಲ್ಲರಿಗೆ ಹಾಗು ಅಲ್ಲಿ ನೆರೆದಿದ್ದ ಜನರಿಗೆ, “ಎಲಿಮೆಲೆಕನಿಗೆ ಮತ್ತು ಕಲ್ಯೋನ್, ಮಹ್ಲೋನ್ ಇವರಿಗೆ ಸೇರಿದ್ದ ಆಸ್ತಿ ಎಲ್ಲವನ್ನೂ ನವೊಮಿಯಿಂದ ನಾನು ಕೊಂಡುಕೊಂಡಿದ್ದೇನೆ. ಇದಕ್ಕೆ ನೀವೆಲ್ಲರೂ ಸಾಕ್ಷಿಗಳು.
10 : ಇದಲ್ಲದೆ, ಮಹ್ಲೋನನ ಪತ್ನಿಯಾದ ಮೋವಾಬ್ಯದ ರೂತಳನ್ನು ನನ್ನ ಹೆಂಡತಿಯನ್ನಾಗಿ ಸ್ವೀಕರಿಸಿದ್ದೇನೆ. ಇದರಿಂದ ಹೊಲದ ಖಾತೆ ಗತಿಸಿದ ಮಹ್ಲೋನನ ಹೆಸರಿನಲ್ಲೇ ಉಳಿಯುವುದು. ಮಾತ್ರವಲ್ಲ, ಅವನ ವಂಶವೃಕ್ಷವು ಅವನ ಬಂಧುಬಳಗದವರಲ್ಲೂ ಊರಿನಲ್ಲೂ ನೆಲೆಯಾಗಿರುವುದು. ಇದಕ್ಕೆ ನೀವೆಲ್ಲರು ಸಾಕ್ಷಿಗಳು,” ಎಂದನು.
11 : ಆಗ ಊರಿನ ಹಿರಿಯರು ಮತ್ತು ನೆರೆದಿದ್ದ ಸಭಿಕರು: “ಹೌದು, ನಾವೆಲ್ಲರೂ ಸಾಕ್ಷಿಗಳು. ಇಸ್ರಯೇಲಿನ ಮನೆತನವನ್ನು ವೃದ್ಧಿಗೊಳಿಸಿದ ರಾಹೆಲ್ ಮತ್ತು ಲೆಯಾ ಎಂಬ ಕುಲೀನೆಯರನ್ನು ಸರ್ವೇಶ್ವರ ಆಶೀರ್ವದಿಸಲಿ! ಎಫ್ರಾತ ಕುಲದಲ್ಲಿ ಧನವಂತನಾಗು;
12 : ಬೆತ್ಲೆಹೇಮಿನಲ್ಲಿ ಘನವಂತನಾಗು! ಆ ಯುವತಿಯ ಮುಖಾಂತರ ಸರ್ವೇಶ್ವರ ನಿನಗೆ ಅನುಗ್ರಹಿಸುವ ಸಂತಾನದಿಂದ ನಿನ್ನ ಮನೆತನವು, ಯೆಹೂದನಿಗೆ ತಾಮಾರಳಿಂದ ಹುಟ್ಟಿದ ಪೆರೆಚನ ಮನೆತನದಂತೆ ಪ್ರಖ್ಯಾತವಾಗಲಿ!” ಎಂದು ಹರಸಿದರು.
13 : ಬೋವಜನು ರೂತಳನ್ನು ಮದುವೆಯಾಗಿ ಮನೆಗೆ ಕರೆದುಕೊಂಡು ಹೋದನು. ಸರ್ವೇಶ್ವರಸ್ವಾಮಿಯ ಅನುಗ್ರಹದಿಂದ ಆಕೆ ಗರ್ಭಿಣಿಯಾಗಿ ಒಬ್ಬ ಮಗನನ್ನು ಹೆತ್ತಳು. ಊರಿನ ಮಹಿಳೆಯರು ನವೊಮಿಗೆ:
14 : “ಸರ್ವೇಶ್ವರ ಸ್ವಾಮಿಗೆ ಸ್ತುತಿ ಸ್ತೋತ್ರ! ನಿನಗೊಬ್ಬ ವಂಶೋದ್ಧಾರಕನನ್ನು ಅನುಗ್ರಹಿಸಿದ ಇಸ್ರಯೇಲ್ ನಾಡಿನಲ್ಲಿ ಆ ಮಗು ಪ್ರಖ್ಯಾತನಾಗಲಿ!
15 : ಅವನು ನಿನಗೆ ನವಚೈತನ್ಯವನ್ನು ಕೊಟ್ಟು ವೃದ್ಧಾಪ್ಯದಲ್ಲಿ ನಿನಗೆ ಸಂರಕ್ಷಣೆಯನ್ನು ನೀಡುವನು. ಸಪ್ತ ಕುವರರಿಗಿಂತ ನಿನಗೆ ಮೆಚ್ಚುಗೆ ಆದ ನಿನ್ನ ಪ್ರಿಯ ಸೊಸೆ ಆ ಮಗುವನ್ನು ನಿನಗೆ ಕೊಟ್ಟಿದ್ದಾಳೆ!” ಎಂದು ಹರಸಿದರು.
16 : ನವೊಮಿ ಆ ಮಗುವನ್ನು ಎತ್ತಿಕೊಂಡು ತನ್ನ ಮಡಿಲಲ್ಲಿಟ್ಟುಕೊಂಡು ಸಾಕಿ ಸಲಹಿದಳು.
17 : ನೆರೆಹೊರೆಯ ಮಹಿಳೆಯರು, “ನವೊಮಿಗೆ ಕುಲಪುತ್ರನೊಬ್ಬನು ಹುಟ್ಟಿದ್ದಾನೆ!” ಎಂದು ಹೇಳಿ ಆ ಮಗುವಿಗೆ “ಓಬೇದ್” ಎಂದು ಹೆಸರಿಟ್ಟರು. ಇವನೇ ಜೆಸ್ಸೆಯ ತಂದೆ, ದಾವೀದನ ತಾತ.
18 : ಪೆರೆಚನಿಂದ ದಾವೀದನವರೆಗಿನ ವಂಶಾವಳಿ:
19 : ಪೆರೆಚನಿಗೆ ಹೆಜ್ರೋನನು, ಹೆಜ್ರೋನನಿಗೆ ರಾಮನು, ರಾಮನಿಗೆ ಅಮಿನದಾಬನು ಹುಟ್ಟಿದರು.
20 : ಅಮಿನದಾಬನಿಗೆ ನಹಶೋನ, ನಹಶೋನನಿಗೆ ಸಲ್ಮೋನ್,
21 : ಸಲ್ಮೋನನಿಗೆ ಬೋವಜನು ಹುಟ್ಟಿದರು.
22 : ಬೋವಜನಿಗೆ ಓಬೇದ್, ಓಬೇದನಿಗೆ ಜೆಸ್ಸಯ, ಜೆಸ್ಸಯನಿಗೆ ದಾವೀದ ಹುಟ್ಟಿದರು.

Holydivine