Joel - Chapter 2
Holy Bible

1 : ಸಿಯೋನಿನಲ್ಲಿ ಕೊಂಬೂದಿರಿ; ನನ್ನ ಪರಿಶುದ್ಧ ಪರ್ವತದಲ್ಲಿ ಎಚ್ಚರಿಕೆಯ ವಾಣಿ ಮೊಳಗಲಿ; ಸಮಸ್ತ ದೇಶನಿವಾಸಿಗಳು ಹೆದರಿ ನಡುಗಲಿ, ಸರ್ವೇಶ್ವರಸ್ವಾಮಿಯ ದಿನ ಬರಲಿದೆ, ಸನ್ನಿಹಿತವಾಗಿದೆ.
2 : ಅದು ಕಾರಿರುಳಿನ ಕರಾಳ ದಿನ, ಕಾರ್ಮುಗಿಲ ಕಾರ್ಗತ್ತಲ ದಿನ. ಮುಂಬೆಳಕು ಗುಡ್ಡದಿಂದ ಗುಡ್ಡಕ್ಕೆ ಹರಡುವಂತೆ ಪ್ರಬಲವಾದ ದೊಡ್ಡ ಸೈನ್ಯವೊಂದು ಬರುತ್ತಿದೆ; ಇಂಥ ಸೈನ್ಯ ಹಿಂದೆಂದೂ ಬಂದಿಲ್ಲ, ತಲತಲಾಂತರಕ್ಕೂ ಬರುವಂತಿಲ್ಲ.
3 : ಅದರ ಮುಂದೆ ಕಬಳಿಸುವ ಬೆಂಕಿ; ಅದರ ಹಿಂದೆ ಧಗಧಗಿಸುವ ಜ್ವಾಲೆ. ಅದು ಬರುವ ಮುನ್ನ ನಾಡು ಏದೆನ್ ಉದ್ಯಾನವನ; ಅದು ದಾಟಿದ ನಂತರ ಸುಡುಗಾಡು. ಅದರ ಆಪತ್ತಿನಿಂದ ಯಾರೂ ತಪ್ಪಿಸಿಕೊಳ್ಳುವಂತಿಲ್ಲ.
4 : ಅವು ಕುದುರೆಗಳಂತೆ ಕಾಣಿಸಿಕೊಳ್ಳುತ್ತವೆ; ಸಮರದ ಸವಾರರಂತೆ ಓಡಾಡುತ್ತವೆ.
5 : ಬೆಟ್ಟಗಳ ತುತ್ತ ತುದಿಯಲ್ಲಿ ಹಾರಾಡುತ್ತವೆ; ರಥಗಳಂತೆ ಚೀತ್ಕಾರ ಮಾಡುತ್ತವೆ; ಕೂಳೆಸುಡುವ ಬೆಂಕಿಯಂತೆ ಚಟಪಟ ಮಾಡುತ್ತವೆ; ಸಮರಕ್ಕೆ ಸಿದ್ಧವಾದ ಶೂರರ ಸೈನ್ಯದಂತಿವೆ.
6 : ಅವುಗಳ ನೋಟ, ರಾಷ್ಟ್ರಗಳಿಗೆ ಪ್ರಾಣಸಂಕಟ; ಎಲ್ಲರ ಮುಖಗಳಿಗೆ ಮಂಕಾಟ.
7 : ಅವು ಶೂರರಂತೆ ಹೋರಾಡುತ್ತವೆ, ಯೋಧರಂತೆ ಗೋಡೆಗಳನ್ನೇರುತ್ತವೆ, ಸಾಲು ಸಾಲಾಗಿ ನಡೆದು, ಕ್ರಮತಪ್ಪದೆ ಸಾಗುತ್ತವೆ.
8 : ನೂಕುನುಗ್ಗಲಿಲ್ಲದೆ, ಸಾಲುಸಾಲಾಗಿ ನಡೆಯುತ್ತವೆ, ಸಾಲುಗಳನ್ನು ಒಡೆಯದೆ ಆಯುಧಗಳ ನಡುವೆ ನುಗ್ಗುತ್ತವೆ.
9 : ಪಟ್ಟಣಗಳ ಮೇಲೆ ಹಾರಾಡುತ್ತವೆ, ಗೋಡೆಗಳ ಮೇಲೆ ಓಡಾಡುತ್ತವೆ, ಮನೆಗಳನ್ನು ಹತ್ತಿ, ಕಳ್ಳರಂತೆ ಕಿಟಕಿಗಳಲ್ಲಿ ನುಗ್ಗುತ್ತವೆ.
10 : ಅವುಗಳ ಮುಂದೆ ಭೂಮಂಡಲ ಕಂಪಿಸುತ್ತದೆ. ಆಕಾಶಮಂಡಲ ನಡುಗುತ್ತದೆ. ಸೂರ್ಯಚಂದ್ರಗಳು ಮಂಕಾಗುತ್ತವೆ, ನಕ್ಷತ್ರಗಳು ಕಾಂತಿಗುಂದುತ್ತವೆ.
11 : ಸರ್ವೇಶ್ವರ ಗರ್ಜಿಸಿ ತಮ್ಮ ಸೈನ್ಯಕ್ಕೆ ಆಜ್ಞಾಪಿಸುತ್ತಾರೆ. ಅವರ ಸೈನ್ಯ ದೊಡ್ಡದು. ಅವರ ಆಜ್ಞೆಯನ್ನು ಪಾಲಿಸುವವನು ಬಲಾಢ್ಯನು. ಸರ್ವೇಶ್ವರ ಸ್ವಾಮಿಯ ದಿನ ಮಹತ್ತರ; ಅತಿ ಭಯಂಕರ; ಅದರೆದುರಿಗೆ ನಿಲ್ಲಲು ಯಾರಿಗಿದೆ ಧೈರ್ಯ?
12 : ಸರ್ವೇಶ್ವರ ಇಂತೆನ್ನುತ್ತಾರೆ: “ಈಗಲಾದರೂ ಮನಃಪೂರ್ವಕವಾಗಿ ನನ್ನ ಕಡೆಗೆ ತಿರುಗಿಕೊಳ್ಳಿ. ಉಪವಾಸ ಕೈಗೊಂಡು, ಅತ್ತು ಗೋಳಾಡಿ.”
13 : ನಿಮ್ಮ ಉಡುಪುಗಳನ್ನು ಅಲ್ಲ, ಹೃದಯಗಳನ್ನು ಸೀಳಿರಿ: ನಿಮ್ಮ ದೇವರಾದ ಸರ್ವೇಶ್ವರಸ್ವಾಮಿಯ ಕಡೆಗೆ ತಿರುಗಿಕೊಳ್ಳಿ; ಅವರು ದಯಾವಂತರು, ಕರುಣಾಮೂರ್ತಿ, ಸಹನಶೀಲ, ಪ್ರೀತಿಮಯ. ವಿಧಿಸಬೇಕಾಗಿದ್ದ ದಂಡನೆಗಾಗಿ ಮನನೊಂದುಕೊಳ್ಳುವಂಥವರು.
14 : ಒಂದು ವೇಳೆ ಸರ್ವೇಶ್ವರ ತಮ್ಮ ಮನಸ್ಸನ್ನು ಬದಲಾಯಿಸಬಹುದು. ನಿಮ್ಮ ಕಡೆಗೆ ತಿರುಗಿ ನಿಮ್ಮನ್ನು ಆಶೀರ್ವದಿಸಬಹುದು; ನಿಮ್ಮ ದೇವರಾದ ಅವರಿಗೆ ಅರ್ಪಿಸಲು ಬೇಕಾದ ನೈವೇದ್ಯಗಳನ್ನು ಧಾರಾಳವಾಗಿ ಅನುಗ್ರಹಿಸಬಹುದು.
15 : ಸಿಯೋನ್ ಶಿಖರದ ಮೇಲೆ ನಿಂತು ಕೊಂಬೂದಿರಿ. ಉಪವಾಸ ದಿನವನ್ನು ಘೋಷಿಸಿರಿ. ಮಹಾಸಭೆಯನ್ನು ಕರೆಯಿರಿ.
16 : ಜನರನ್ನು ಒಟ್ಟುಗೂಡಿಸಿರಿ; ಸಭೆಯನ್ನು ಏರ್ಪಡಿಸಿರಿ; ವೃದ್ಧರನ್ನು, ಮಕ್ಕಳನ್ನು, ಮೊಲೆಗೂಸುಗಳನ್ನು ಕರೆತನ್ನಿರಿ. ವಧೂವರರು ತಮ್ಮ ಕಲ್ಯಾಣಗೃಹದಿಂದ ಹೊರಟುಬರಲಿ.
17 : ಸರ್ವೇಶ್ವರಸ್ವಾಮಿಯ ಪರಿಚಾರಕರಾದ ಯಾಜಕರು ದೇವಾಲಯದ ದ್ವಾರ ಮಂಟಪಕ್ಕೂ ಬಲಿಪೀಠಕ್ಕೂ ನಡುವೆ ಶೋಕತಪ್ತರಾಗಿ ಹೀಗೆಂದು ಪ್ರಾರ್ಥಿಸಲಿ: “ಕರುಣೆ ತೋರು, ಹೇ ಸರ್ವೇಶ್ವರಾ, ನಿನ್ನ ಪ್ರಜೆಗೆ ನಿಂದೆಯಾಗದಿರಲಿ ನಿನ್ನ ಸ್ವಂತ ಜನತೆಗೆ ಗುರಿಯಾಗದಿರಲಿ ಅವರು ಅನ್ಯರ ತಾತ್ಸಾರಕೆ ‘ನಿಮ್ಮ ದೇವನೆಲ್ಲಿ?’ ಎಂಬ ಪರಕೀಯರ ಹೀಯಾಳಿಕೆಗೆ”
18 : ಆಗ ಸರ್ವೇಶ್ವರ ತಮ್ಮ ದೇಶದ ಮೇಲೆ ಅಭಿಮಾನಗೊಂಡು, ತಮ್ಮ ಜನರಿಗೆ ಕರುಣೆ ತೋರಿ ಹೀಗೆಂದರು:
19 : “ನಿಮಗೆ ಧಾನ್ಯ, ದ್ರಾಕ್ಷಾರಸ, ತೈಲಗಳನ್ನು ಅನುಗ್ರಹಿಸುವೆನು; ನೀವು ಸಂತೃಪ್ತರಾಗುವಿರಿ; ನಿಮ್ಮನ್ನೆಂದಿಗೂ ಅನ್ಯಜನರ ನಿಂದೆಗೆ ಗುರಿಮಾಡೆನು.
20 “ಉತ್ತರದಿಂದ ಬಂದ ಮಿಡತೆಗಳ ಸೈನ್ಯವನ್ನು ನಿಮ್ಮಿಂದ ತೊಲಗಿಸುವೆನು; ಹಾಳುಬಿದ್ದ ಬಂಜರುಭೂಮಿಗೆ ಅದನ್ನು ಓಡಿಸುವೆನು. ಅದರ ಮುಂಭಾಗವನ್ನು ಪೂರ್ವದ ಸಮುದ್ರಕ್ಕೂ ಹಿಂಭಾಗವನ್ನು ಪಶ್ಚಿಮದ ಸಮುದ್ರಕ್ಕೂ ತಳ್ಳಿಬಿಡುವೆನು. ಅದು ನಿಮಗೆ ಮಾಡಿದ ಘೋರದುಷ್ಕೃತ್ಯಗಳಿಗಾಗಿ ದಂಡಿಸುವೆನು. ಅದರ ಹೆಣಗಳ ದುರ್ವಾಸನೆ ಏರುವುದು; ಗಬ್ಬು ನಾರುವುದು.”
21 : “ಭೂನಿವಾಸಿಗಳೇ, ಭಯಪಡಬೇಡಿರಿ; ಹರ್ಷಿಸಿ ಆನಂದಿಸಿರಿ. ಸರ್ವೇಶ್ವರ ಮಹತ್ಕಾರ್ಯಗಳನ್ನು ಎಸಗಿದ್ದಾರೆ.
22 : ಭೂಜಂತುಗಳೇ ಅಂಜಬೇಡಿ, ವನವೃಕ್ಷಗಳು ಫಲಭರಿತವಾಗಿರುವುವು; ಅಂಜೂರ, ದ್ರಾಕ್ಷಿಗಳೆಲ್ಲವೂ ತುಂಬಿ ತುಳುಕುವುವು.
23 : “ಸಿಯೋನಿನ ಜನರೇ, ಹರ್ಷಿಸಿರಿ; ಸ್ವಾಮಿ ದೇವರಾದ ಸರ್ವೇಶ್ವರ ನಿಮಗೆ ಮಾಡಿದ ಉಪಕಾರಗಳಿಗಾಗಿ ಆನಂದಿಸಿರಿ. ನಿಮಗೆ ಅವರು ಮುಂಗಾರು ಮಳೆಯನ್ನು ಸಾಕಷ್ಟು ಕೊಡುವರು; ಮುಂಗಾರು ಹಿಂಗಾರು ಮಳೆಗಳನ್ನು ವಾಡಿಕೆಯಂತೆ ಸಮೃದ್ಧಿಯಾಗಿ ಸುರಿಸುವರು.
24 : ಕಣಗಳಲ್ಲಿ ಗೋದಿ ರಾಶಿರಾಶಿಯಾಗಿರುವುದು. ತೊಟ್ಟಿಗಳಲ್ಲಿ ದ್ರಾಕ್ಷಾರಸ, ತೈಲಗಳು ತುಂಬಿರುವುವು.
25 : ಗುಂಪು ಮಿಡತೆ, ಕಂಬಳಿ ಮಿಡತೆ, ಚೂರಿ ಮಿಡತೆ, ನಾನು ಕಳುಹಿಸಿದ ಈ ಮಿಡತೆಗಳ ಸೈನ್ಯಗಳು ತಿಂದು ನಷ್ಟಮಾಡಿದ ವರ್ಷಗಳನ್ನು ನಿಮಗೆ ಭರಿಸಿಕೊಡುವೆನು.
26 : ನೀವು ಹೊಟ್ಟೆ ತುಂಬ ಊಟಮಾಡಿ ತೃಪ್ತರಾಗುವಿರಿ; ನಿಮಗಾಗಿ ಮಹತ್ಕಾರ್ಯಗಳನ್ನು ಎಸಗಿದ ದೇವರಾದ ಸರ್ವೇಶ್ವರಸ್ವಾಮಿಯ ನಾಮವನ್ನು ಕೊಂಡಾಡುವಿರಿ; ನನ್ನ ಜನರಿಗೆ ಎಂದಿಗೂ ಆಶಾಭಂಗವಾಗದು.
27 : ನಾನೇ ಇಸ್ರಯೇಲಿನ ಮಧ್ಯೆ ನೆಲೆಯಾಗಿ ಇರುವವನು. ನಾನೇ ನಿಮ್ಮ ಸರ್ವೇಶ್ವರನಾದ ದೇವರು; ನಾನಲ್ಲದೆ ಬೇರೆ ದೇವರು ನಿಮಗಿಲ್ಲ. ನನ್ನ ಜನರಿಗೆ ಎಂದಿಗೂ ಆಶಾಭಂಗವಾಗದು ಎಂದು ನಿಮಗೆ ಮನದಟ್ಟಾಗುವುದು.
28 : “ತರುವಾಯ ಎಲ್ಲಾ ಮಾನವರ ಮೇಲೆ ನನ್ನ ಆತ್ಮವನ್ನು ಸುರಿಸುವೆನು; ಪುತ್ರಪುತ್ರಿಯರು ಪ್ರವಾದನೆ ಮಾಡುವರು; ನಿಮ್ಮ ಹಿರಿಯರು ಸ್ವಪ್ನಶೀಲರಾಗುವರು; ನಿಮ್ಮ ಯುವಕರಿಗೆ ದಿವ್ಯದರ್ಶನಗಳಾಗುವುವು.
29 : ಆ ದಿನಗಳಲ್ಲಿ ದಾಸದಾಸಿಯರ ಮೇಲೂ ನನ್ನ ಆತ್ಮವನ್ನು ಸುರಿಸುವೆನು.
30 : ಭೂಮ್ಯಾಕಾಶಗಳಲ್ಲಿ ಸೂಚಕ ಕಾರ್ಯಗಳನ್ನು ಮಾಡುವೆನು. ರಕ್ತಧಾರೆ, ಅಗ್ನಿಪ್ರಳಯ, ಧೂಮಕೇತು ಕಾಣಿಸುವಂತೆ ಮಾಡುವೆನು.
31 : ಸರ್ವೇಶ್ವರಸ್ವಾಮಿಯ ಭಯಂಕರ ಮಹಾದಿನದ ಮುಂಚೆ ಸೂರ್ಯನು ಅಂಧಕಾರಮಯನಾಗುವನು; ಚಂದ್ರನು ರಕ್ತಗೆಂಪಾಗುವನು.
32 : ಆದರೆ ಸರ್ವೇಶ್ವರಸ್ವಾಮಿಯ ನಾಮಸ್ಮರಣೆ ಮಾಡುವವರೆಲ್ಲರೂ ಜೀವೋದ್ಧಾರವನ್ನು ಪಡೆಯುವರು. ಅವರೇ ತಿಳಿಸಿರುವಂತೆ ಸಿಯೋನ್ ಪರ್ವತದಲ್ಲೂ ಜೆರುಸಲೇಮಿನಲ್ಲೂ ಅನೇಕರಿಗೆ ಮುಕ್ತಿ ದೊರಕುವುದು. ಅಳಿದುಳಿದವರಲ್ಲಿ ಆ ಸ್ವಾಮಿಯ ಕರೆಹೊಂದಿವರು ಬದುಕುವರು.”

Holydivine